Advertisement

ರೈತರೇ ಎಚ್ಚರ; ನಕಲಿ ಬೀಜಗಳ ಜಾಲಕ್ಕೆ ಸಿಲುಕದಿರಿ

10:54 AM Jun 05, 2019 | Team Udayavani |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಇನ್ನೇನು ಮುಂಗಾರು ಶುರುವಾಗುತ್ತಿದ್ದು ಎಲ್ಲೆಡೆ ರೈತಾಪಿ ವರ್ಗ ಕೃಷಿ ಚಟುವಟಿಕೆಗೆ ಭಾರೀ ಸಿದ್ಧತೆ ನಡೆಸುತ್ತಿದೆ. ಅದರ ಜತೆಗೆ ಕೆಲ ಖಾಸಗಿ ಬಿತ್ತನೆ ಬೀಜ ಮಾರಾಟ ಕಂಪನಿಗಳು ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿವೆ.

Advertisement

ಆದರೆ, ಅಂಥ ಕಡೆ ಖರೀದಿಸಿದ ಬೀಜಗಳು ಕೆಲವೊಮ್ಮೆ ವಿಫಲಗೊಳ್ಳುತ್ತಿದ್ದು, ರೈತರು ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಇಲಾಖೆ ಅಂಥ ಬೀಜಗಳನ್ನು ಖರೀದಿಸದಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದೆಯಾದರೂ, ಪಕ್ಕದ ತೆಲಂಗಾಣ, ಆಂಧ್ರದಿಂದ ಕೆಲ ಖಾಸಗಿ ಕಂಪನಿಗಳು ಗಡಿಭಾಗದ ಪ್ರದೇಶಗಳಲ್ಲಿ ತಮ್ಮ ಕಂಪನಿ ಪ್ರಚಾರ ಮಾಡುತ್ತಿವೆ.

ಎಕರೆಗೆ 10-15 ಕ್ವಿಂಟಲ್ ಹತ್ತಿ ಇಳುವರಿ ಬರಲಿದೆ, ಕ್ರಿಮಿನಾಶಕದ ಅಗತ್ಯವಿಲ್ಲ, ದೊಡ್ಡ ದೊಡ್ಡ ಕಾಯಿ ಕಾಯುತ್ತದೆ ಎಂದೆಲ್ಲ ಹೇಳಿ ರೈತರ ಮನವೊಲಿಸುವ ಯತ್ನ ನಡೆದಿದೆ. ಗ್ರಾಮೀಣ ಭಾಗದಲ್ಲಿ ಟಂಟಂ ಆಟೋಗಳಲ್ಲಿ ಮೈಕ್‌ ಹಾಕಿಸಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಅಲ್ಲದೇ, ಅಂಗಡಿಗಳಲ್ಲಿ ದೊರೆಯುವುದಕ್ಕಿಂತ ಕಡಿಮೆ ದರದಲ್ಲಿ ಸಿಗುತ್ತವೆ ಎಂದೆಲ್ಲ ಪ್ರಚಾರ ನಡೆಸಲಾಗುತ್ತಿದೆ.

ಕೈ ಕೊಡುವ ಇಳುವರಿ: ಇಂಥದ್ದೇ ಬೀಜಗಳನ್ನು ಖರೀದಿಸಿ ಈ ಹಿಂದೆ ರೈತರು ಸಾಕಷ್ಟು ಮೋಸ ಹೋಗಿರುವ ಉದಾಹರಣೆಗಳಿವೆ. ಮೊಳಕೆಯೇ ಬಾರದೆ ಬೆಳೆಯನ್ನು ರೈತರು ಕೈಯ್ನಾರೆ ಕೆಡಿಸಿದ ನಿದರ್ಶನಗಳಿವೆ. ಕೆಲ ನಕಲಿ ಬಿತ್ತನೆ ಬೀಜ ಕಂಪನಿಗಳು ರೈತರನ್ನು ವಂಚಿಸುತ್ತವೆ. ಕೆಜಿಗೆ 5-6 ನೂರು ಮಾತ್ರ ಎಂದು ಪುಸಲಾಯಿಸಿ ಮಾರಾಟ ಮಾಡಿದವರು ಪುನಃ ಕಾಣುವುದೇ ಇಲ್ಲ. ಆದರೆ, ಅಂಥ ಬಿತ್ತನೆ ಬೀಜ ಖರೀದಿಸಿದ ರೈತರು ಅತ್ತ ಹಣವೂ ಉಳಿಯದೆ, ಇತ್ತ ಇಳುವರಿಯೂ ಬಾರದೆ ಸಂದಿಗ್ಧ ಸ್ಥಿತಿ ಎದುರಿಸಿದ್ದೂ ಇದೆ.

ಎಚ್ಚರಿಕೆ ಮುಖ್ಯ: ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುವಂತೆ ಬಿತ್ತನೆ ಬೀಜಗಳನ್ನು ಎಲ್ಲಿ ಬೇಕಾದಲ್ಲಿ ಖರೀದಿಸಬಾರದು. ಪ್ರಮಾಣಿತ ಕಂಪನಿಗಳ ಬೀಜಗಳನ್ನೇ ಖರೀದಿಸುವುದು ಸೂಕ್ತ. ಅದರಲ್ಲೂ ಅಂಗಡಿಗಳಿಗೆ ತೆರಳಿ, ರೈತ ಸಂಪರ್ಕ ಕೇಂದ್ರಗಳಿಂದ ಮಾಹಿತಿ ಪಡೆದು ಖರೀದಿಸಬೇಕು ಎನ್ನುತ್ತಾರೆ.

Advertisement

ಗಡಿಭಾಗದ ಹಳ್ಳಿಗಳೇ ಗುರಿ: ಇಂಥ ನಕಲಿ ಕಂಪನಿಗಳು ಹೆಚ್ಚಾಗಿ ಗಡಿಭಾಗದ ಹಳ್ಳಿಗಳನ್ನೇ ಗುರಿಯಾಗಿಸಿಕೊಳ್ಳುತ್ತವೆ. ರಾಯಚೂರು ಹೇಳಿ ಕೇಳಿ ಆಂಧ್ರ ಪ್ರಭಾವಿತ ಜಿಲ್ಲೆಯಾಗಿದ್ದು, ತೆಲುಗು ಭಾಷೆಯಲ್ಲಿಯೇ ಪ್ರಚಾರ ಮಾಡುವ ವಾಹನಗಳು ಓಡಾಡುತ್ತಿವೆ. ಹಾಡಹಗಲು ಹಳ್ಳಿಗಳ ಜಗಲಿ ಕಟ್ಟೆ ಮೇಲೆ ಕುಳಿತ ರೈತರನ್ನು ಮಾತಿಗೆಳೆದು ಬೀಜ ಮಾರುವ ಸಾಧ್ಯತೆಗಳಿವೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರಚಾರವೂ ಮುಖ್ಯ: ಖಾಸಗಿ ಕಂಪನಿಗಳು ಇಷ್ಟೆಲ್ಲ ಪ್ರಚಾರ ಮಾಡಿದರೆ ಜಿಲ್ಲಾಡಳಿತ ಮಾತ್ರ ಪತ್ರಿಕಾ ಪ್ರಕಟಣೆ ನೀಡಿ ಕೈ ತೊಳೆದುಕೊಳ್ಳುತ್ತದೆ ಎಂದು ದೂರುತ್ತಾರೆ ರೈತ ಮುಖಂಡರು. ಇಲಾಖೆ ಕೂಡ ಹಳ್ಳಿಗಳಲ್ಲಿ ಜನರಿಗೆ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ನಕಲಿ ಬೀಜಗಳ ಮೊರೆ ಹೋಗದಂತೆ ಎಚ್ಚರಿಕೆ ನೀಡಬೇಕು. ಅದಕ್ಕೆ ಹೆಚ್ಚು ಪ್ರಚಾರ ನೀಡುವ ಅಗತ್ಯವಿದೆ ಎನ್ನುತ್ತಾರೆ.

ಇತ್ತೀಚೆಗೆ ಕೆಲ ಖಾಸಗಿ ಬಿತ್ತನೆ ಬೀಜ ಕಂಪನಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡುತ್ತಿವೆ. ಕಡಿಮೆ ದರ, ಹೆಚ್ಚು ಇಳುವರಿ ಎಂದೆಲ್ಲ ಹೇಳಿ ರೈತರ ಮನವೊಲಿಸುತ್ತಿವೆ. ಅಂಥ ಕಂಪನಿಗಳ ಮೇಲೆ ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು.
•ಲಕ್ಷ್ಮಣಗೌಡ ಕಡಗಂದೊಡ್ಡಿ,
ರೈತ ಸಂಘದ ಜಿಲ್ಲಾಧ್ಯಕ್ಷ

ರೈತರು ಯಾವುದೇ ಕಾರಣಕ್ಕೂ ಅನಧಿಕೃತ ಕಂಪನಿಗಳ ಬಿತ್ತನೆ ಬೀಜ ಖರೀದಿಸಬಾರದು. ಒಂದು ವೇಳೆ ಖರೀದಿಸಿದರೂ ಕೂಡ ಸೂಕ್ತ ಬಿಲ್ಗಳನ್ನು ಪಡೆಯಬೇಕು. ಇಳುವರಿ ಕೈಗೆ ಬರುವವರೆಗೂ ಪ್ಯಾಕೆಟ್‌ಗಳನ್ನು ಕಾಯ್ದಿಡಬೇಕು. ಒಂದು ವೇಳೆ ನಕಲಿಯಾಗಿದ್ದಲ್ಲಿ ಅಂಥ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ದಾಖಲೆ ಬೇಕಾಗುತ್ತದೆ. ಆದರೆ, ರೈತರು ಅಧಿಕೃತ ಅಂಗಡಿಗಳಲ್ಲಿ ಬಿತ್ತನೆ ಬೀಜ ಖರೀದಿಸುವುದು ಸೂಕ್ತ.
ಚೇತನಾ ಪಾಟೀಲ,
ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next