Advertisement

ಗಡಿ ಜಿಲ್ಲೆಯ ಲ್ಲೈತಿ ಆಂಗ್ಲ ಮಾಧ್ಯಮ ಪ್ರೀತಿ

03:51 PM May 30, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಹಣಕಾಸು ಮುಗ್ಗಟ್ಟಿನಿಂದ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಓದಿಸಲಾಗದೆ ನೊಂದುಕೊಳ್ಳುತ್ತಿದ್ದ ಹೆತ್ತವರಿಗೆ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಶುರುವಾಗುತ್ತಿರುವುದು ಸಂತಸ ಮೂಡಿಸಿದೆ.

Advertisement

ಕೆಲವೆಡೆ ಹಳ್ಳಿಗಾಡಿನ ಕೆಲ ವಿದ್ಯಾವಂತ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಿಡಿಯಂಗೆ ದಾಖಲಿಸಿಕೊಳ್ಳುವಂತೆ ಕೇಳುತ್ತಿದ್ದರೆ, ಇನ್ನೂ ಕೆಲವೆಡೆ ಶಿಕ್ಷಕರೇ ಪಾಲಕರ ಮನವೊಲಿಸುತ್ತಿದ್ದಾರೆ. ಎಲ್ಲಿಯಾದರೂ ಓದಲಿ ಇಂಗ್ಲಿಷ್‌ ಮಾಧ್ಯಮ ಓದಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿರುವ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ.

ಮೊದಲನೇ ಹಂತದಲ್ಲಿ ಜಿಲ್ಲೆಯ 33 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳು ಶುರುವಾದರೆ, 9 ಕರ್ನಾಟಕ ಪಬ್ಲಿಕ್‌ ಸ್ಕೂಲ್ಗಳಲ್ಲಿ ಎಲ್ಕೆಜಿ, ಯುಕೆಜಿ ಶುರುವಾಗುತ್ತಿದೆ. ಮೇ 29ಕ್ಕೆ ಶುರುವಾಗಬೇಕಿತ್ತು. ಆದರೆ, ಬಿಸಿಲಿನ ಪ್ರಖರತೆ ಇನ್ನೂ ಕಡಿಮೆ ಆಗದ ಕಾರಣ ಜೂ.5ರವರೆಗೆ ರಜೆ ವಿಸ್ತರಿಸಲಾಗಿದೆ. ಹೀಗಾಗಿ ಇನ್ನೂ ದಾಖಲಾತಿ ಪ್ರಮಾಣ ನಿಖರವಾಗಿ ಗೊತ್ತಾಗಿಲ್ಲ.

ಆಂಗ್ಲ ಮಾಧ್ಯಮ ಬೋಧನೆಗೆ ಆಸಕ್ತಿ ಹೊಂದಿರುವ ಒಟ್ಟು 45 ಶಿಕ್ಷಕರಿಗೆ ಈಗಾಗಲೇ 15 ದಿನಗಳ ವಿಶೇಷ ತರಬೇತಿ ನೀಡಲಾಗಿದೆ. ಮಟಮಾರಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಮತ್ತು ಒಂದನೇ ತರಗತಿಯನ್ನು ಆಂಗ್ಲ ಮಾಧ್ಯಮ ಬೋಧನೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲಿಂದಲೇ ಶಾಲೆಗೆ ಪ್ರಾರಂಭ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಮಿಶ್ರ ಪ್ರತಿಕ್ರಿಯೆ: ಸಾರ್ವಜನಿಕ ವಲಯದಲ್ಲಿ ಮಾತ್ರ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದು ಉತ್ತಮ ಯೋಜನೆಯಾಗಿದ್ದು, ಬಡ, ಮಧ್ಯಮ ವರ್ಗದವರ ಮಕ್ಕಳು ಕೂಡ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಬಹುದು ಎನ್ನುತ್ತಿದ್ದಾರೆ. ಅಲ್ಲದೇ, ಶಾಲೆಗೆ ತೆರಳಿ ಇಂಗ್ಲಿಷ್‌ ಮಾಧ್ಯಮದ ಅರ್ಜಿಗಳನ್ನೇ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಇದು ಮಕ್ಕಳ ಕಲಿಕೆಗೆ ಸಮಸ್ಯೆ ಉಂಟು ಮಾಡಲಿದೆ. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿದ್ದರೆ ಸೂಕ್ತ. ಮಕ್ಕಳು ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಸುಲಭವಾಗಿ ಕಲಿಯಬಲ್ಲರು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಪ್ರಚಾರ-ಸಿದ್ಧತೆ: ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭದ ಕುರಿತು ಇಲಾಖೆ ಕಾಲಕಾಲಕ್ಕೆ ಆಯ್ಕೆಯಾದ ಶಾಲೆಗಳ ಶಿಕ್ಷಕರಿಗೆ ನಿರ್ದೇಶನಗಳನ್ನು ನೀಡುತ್ತಲೇ ಬಂದಿದೆ. ಅದರನ್ವಯ ಶಿಕ್ಷಕರು ಶಾಲೆಯನ್ನು ಸಿದ್ಧಗೊಳಿಸಿದ್ದಾರೆ. ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಪ್ರತ್ಯೇಕ ಕೋಣೆ ಕಾಯ್ದಿರಿಸಿ ಸುಣ್ಣ ಬಣ್ಣ ಬಳಿಯಲಾಗಿದೆ. ಅಲ್ಲದೇ ಗೋಡೆಗಳಿಗೆ ವಿಶೇಷ ಬರಹಗಳನ್ನು ಬಿಡಿಸಲಾಗಿದೆ. ಅದರ ಜತೆಗೆ ಕರಪತ್ರಗಳನ್ನು ಮುದ್ರಿಸಿ ಎಲ್ಲೆಡೆ ಹಂಚಲಾಗಿದೆ. ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹಾಕಿಸುವ ಮೂಲಕವೂ ಪ್ರಚಾರ ಮಾಡಲಾಗಿದೆ.

ಈ ದಿಸೆಯಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಬೇಕಾದ ಸಿದ್ಧತೆಗಳ ಕಾರ್ಯ ಜೋರಾಗಿ ನಡೆದಿದೆ. ಮುಖ್ಯವಾಗಿ ವಿಶೇಷ ತರಗತಿಗಳ ರಚನೆ, ಇಂಗ್ಲಿಷ್‌ ಬೋಧನೆಗಾಗಿ ನುರಿತ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಒಂದನೇ ತರಗತಿಗೆ ಪ್ರವೇಶ ಶುರುವಾಗುತ್ತಿದ್ದು, ಪ್ರತಿ ಶಾಲೆಯಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ನಿಗದಿ ಮಾಡಲಾಗಿದೆ. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಎಲ್ಲೆಲ್ಲಿ ಶಾಲೆಗಳು
ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 33 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗುತ್ತಿದೆ. ರಾಯಚೂರು, ಸಿಂಧನೂರು, ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 5, ರಾಯಚೂರು ಗ್ರಾಮೀಣ, ದೇವದುರ್ಗ, ಲಿಂಗಸುಗೂರು, ಮಾನ್ವಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 4 ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇಂಗ್ಲಿಷ್‌ ಬೋಧನೆಗಾಗಿ 7 ಲಕ್ಷ ರೂ. ವೆಚ್ಚದಲ್ಲಿ ಪ್ರತಿ ಶಾಲೆಯಲ್ಲಿ ಪ್ರತ್ಯೇಕ ಕೋಣೆ ಸಿದ್ಧಗೊಳಿಸಲಾಗುತ್ತಿದೆ. ಅದರ ಜತೆಗೆ ಶಾಲಾ ಆಡಳಿತ ಮಂಡಳಿಗೆ 50 ಸಾವಿರ ರೂ. ಖರ್ಚು ಮಾಡಲು ಅವಕಾಶವಿದೆ.
ಎಲ್ಕೆಜಿ ಕೂಡ ಆರಂಭ
ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರವಲ್ಲದೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನೂ ಇಂಗ್ಲಿಷ್‌ನಲ್ಲಿ ನೀಡಲು ಸರ್ಕಾರ ಮುಂದಾಗಿದೆ. ಜಿಲ್ಲೆಯ 9 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್ಕೆಜಿ ಸ್ಥಾಪನೆಗೆ ಮುಂದಾಗಿದೆ. ಇದಕ್ಕಾಗಿ ಗುತ್ತಿಗೆ ಆಧಾರದಡಿ 10 ತಿಂಗಳ ಅವಧಿಗೆ ಶಿಕ್ಷಕರನ್ನು ನೇಮಿಸುತ್ತಿದ್ದು, 7500 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ಅದನ್ನು ಆಯಾ ಶಾಲೆಗಳ ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದರ ಜತೆಗೆ ಮಕ್ಕಳನ್ನು ಶಾಲೆಗೆ ಕರೆತರಲು, ಬಿಟ್ಟು ಬರಲು ಆಯಾಗಳನ್ನು ನೇಮಿಸುತ್ತಿದ್ದು, ಅವರಿಗೆ 5 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ಇಲ್ಲಿ ಶಿಕ್ಷಕರ, ಆಯಾ ನೇಮಕಾತಿ ಸೇರಿ ಇನ್ನಿತರ ವಿಚಾರಗಳ ನಿರ್ಧಾರವನ್ನು ಆಯಾ ಶಾಲಾ ಸಮಿತಿಗಳಿಗೆ ನೀಡಲಾಗಿದೆ. ಎಲ್ಕೆಜಿಗೆ 30 ಮಕ್ಕಳ ಮಿತಿಯನ್ನು ನಿಗದಿ ಮಾಡಲಾಗಿದೆ. ಜೂ.8ರಿಂದ ಎಲ್ಕೆಜಿ ಆರಂಭವಾಗುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next