Advertisement

ಉದ್ಯೋಗ ಖಾತ್ರಿಯಡಿ ಕೆಲಸ ಕೊಡಿ

04:10 PM Aug 30, 2019 | Naveen |

ರಾಯಚೂರು: ಬರ ಆವರಿಸಿ ಜನರಿಗೆ ಕೆಲಸವಿಲ್ಲದಂತಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯದಷ್ಟು ಉದ್ಯೋಗ ನೀಡಬೇಕು. ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌)ನ ತಾಲೂಕು ಘಟಕದ ಸದಸ್ಯರು ತಾಲೂಕಿನ ಜಂಬಲದಿನ್ನಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಅನ್ನಪೂರ್ಣ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ನಿರಂತರ ಬರದಿಂದ ಬಡ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಜಮೀನು ಇರುವ ರೈತರು ಕೂಡ ಮಳೆ ಇಲ್ಲದೆ ಗುಳೆ ಹೋಗುವ ಸ್ಥಿತಿ ಎದುರಾಗಿದೆ. ಗ್ರಾಪಂ ವ್ಯಾಪ್ತಿಯ ಜಂಬಲದಿನ್ನಿ, ಮಿಡಗಲದಿನ್ನಿ, ಕೊತ್ತದೊಡ್ಡಿ, ಪುಚ್ಚಲದಿನ್ನಿ, ಮಾಳದೊಡ್ಡಿ ಹಾಗೂ ವೈ.ಮಲ್ಲಾಪುರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಕೊಳವೆ ಬಾವಿಗಳಿದ್ದರೂ ಸರಿಯಾಗಿ ನೀರು ಸಿಗುತ್ತಿಲ್ಲ. ದೂರ ಹೋಗಿ ನೀರು ತರುವ ಸ್ಥಿತಿ ಇದೆ. ಕೂಡಲೇ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು ಕೇಂದ್ರ ಆರಂಭಿಸಬೇಕು. ತೆರಿಗೆ ವಸೂಲಿಯಲ್ಲಿ ರಿಯಾಯಿತಿ ನೀಡಬೇಕು, ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಸದಸ್ಯರಾದ ರಂಗಪ್ಪ ಯಾಪಲದಿನ್ನಿ, ಈ.ರಂಗನಗೌಡ, ಗೋಪಾಲರೆಡ್ಡಿ, ಶ್ರೀನಿವಾಸ, ನಾಗೇಂದ್ರ, ನಲ್ಲಾರೆಡ್ಡಿ, ಶ್ರೀರಾಮ, ದೇವಪ್ಪ, ಲಕ್ಷ್ಮಣ, ಅಲಿಸಾಬ್‌ ಕೊತ್ತದೊಡ್ಡಿ, ತತ್ತಿ ನರಸಿಂಹಲು ರಮೇಶ, ವೀರೇಶ, ಉರುಕುಂದ, ವಲಿಸಾಬ್‌ ಸೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next