ರಾಯಚೂರು: ಯಾರು ಹಸಿವಿನಿಂದ ಬಳಲಬಾರದು, ಸ್ವಾಭಿಮಾನದಿಂದ ಬದುಕಬೇಕು ಎಂಬ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುತ್ತಿದ್ದು, ಅದನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ಸರ್ಕಾರ ಶ್ರಮಿಸಲಿದೆ ಎಂದು ಡಿಸಿಎಂ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಗುರುವಾರ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರ್ಜಲ ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಹಾಗೂ ದೇಶದ ಪ್ರಗತಿಗೆ ಪಕ್ಷ ಭೇದ ಮರೆತು ಶ್ರಮಿಸಲಾಗುವುದು. ಕೇಂದ್ರ ಸರ್ಕಾರ ಈ ಹಿಂದೆ ನರೇಗಾ ಯೋಜನೆಗಾಗಿ 60 ಸಾವಿರ ಕೋಟಿ ರೂ. ನೀಡಿತ್ತು. ಲಾಕ್‌ಡೌನ್ ವೇಳೆ ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ 40 ಸಾವಿರ ಕೋಟಿ ರೂ. ಹಣ ಮೀಸಲಿಡಲಾಗಿದೆ. ನರೇಗಾವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಛತ್ತಿಸಘಡ ಮೊದಲಿದ್ದರೆ, ಕರ್ನಾಟಕ ನಂತರದ ಸ್ಥಾನದಲ್ಲಿದೆ. ಅದರಲ್ಲೂ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಅಂತರ್ಜಲ ವೃದ್ಧಿಗೆ ಮುಂದೆ ಬಂದಿದೆ. ರಾಜ್ಯದಲ್ಲಿ ಅಂತರ್ಜಲ ಸಂಪೂರ್ಣ ಕುಸಿದಿದೆ. ಮುಂದಿನ ಮೂರು ವರ್ಷದಲ್ಲಿ ಅಂತರ್ಜಲ ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಮಣ್ಣಿನ ಮೇಲೆ ಆಕ್ರಮಣ ಮಾಡಿದ್ದು, ಒಂದು ಕಾಲಕ್ಕೆ ಶೇ.40ರಷ್ಟು ಇರುತ್ತಿದ್ದ ಅಂತರ್ಜಲ ಈಗ ಕೇವಲ ಶೇ.5ಕ್ಕೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ನರೇಗಾದಡಿ ನೀರಾವರಿ ಪ್ರದೇಶದಲ್ಲಿಯೂ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು. ಕಾಲುವೆಗಳ ಹೂಳು ತೆಗೆಯುವ ಕೆಲಸ ಮಾಡಬೇಕಿದೆ. ಈಗ ಐದು ವರ್ಷಕ್ಕೊಮ್ಮೆ ಹೂಳು ತೆಗೆಯಲಾಗುತ್ತದೆ. ಕಾಯ್ದೆ ತಿದ್ದುಪಡಿ ಮಾಡಿ ಪ್ರತಿ ವರ್ಷ ಹೂಳು ತೆರವಿಗೆ ಕ್ರಮ ಕೈಗೊಳ್ಳಬೇಕು. ಇನ್ನೂ ನರೇಗಾದಡಿ ಕೇವಲ ಕೂಲಿ ನೀಡುವುದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಅದರ ಬದಲಿಗೆ ಕಟ್ಟಡ, ಶಾಶ್ವತ ಯೋಜನೆಗಳನ್ನು ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಅಂದಾಗಲೇ ಅದಕ್ಕೊಂದು ಅರ್ಥ ಸಿಗಲಿದೆ ಎಂದು ಹೇಳಿದರು.
ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ| ಶಿವರಾಜ ಪಾಟೀಲ, ಬಸನಗೌಡ ದದ್ದಲ್, ಶಿವನಗೌಡ ನಾಯಕ, ರಾಜಾ ವೆಂಕಟಪ್ಪ ನಾಯಕ, ಆರ್ಟ್ ಆಫ್ ಲಿವಿಂಗ್‌ನ ನಾಗರಾಜ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ ಇದ್ದರು.