ರಾಯಚೂರು: ರಂಜಾನ್ ಮಾಸದ ಕೊನೆಯ ದಿನ ‘ಈದ್ ಉಲ್ ಫಿತರ್’ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಮುಸ್ಲಿಮರು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಈ ನಿಮಿತ್ತ ನಗರದ ಅರಬ್ ಮೊಹಲ್ಲಾದ ಬಳಿಯ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಮರು ನಂತರ ಏಕಕಾಲಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರು ಪ್ರಾರ್ಥನೆ ಮುಕ್ತಾಯಗೊಳಿಸಿದ ಬಳಿಕ ಧರ್ಮಗುರುಗಳು ಉಪದೇಶ ನೀಡಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಖುರಾನ್ ಪಠಣ ಮಾಡಲಾಯಿತು. ಆನಂತರ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಅಬಾಲವೃದ್ಧರೆಲ್ಲರೂ ಪರಸ್ಪರ ಅಪ್ಪಿಕೊಂಡು ಶುಭಾಶಯ ಕೋರಿದರು.
ಹಬ್ಬದ ಪ್ರಾರ್ಥನೆಗೆ ಅಡ್ಡಿಯಾಗದಂತೆ ಟ್ರಾಫಿಕ್ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಶಂಶಾಲಂ ದರ್ಗಾ ಬಳಿ ರಸ್ತೆ ಮಾರ್ಗ ಬದಲಿಸಲಾಗಿತ್ತು. ಎಲ್ಲ ವಾಹನಗಳು ಎಪಿಎಂಸಿ ಒಳಗಿಂದ ಬರಲು ವ್ಯವಸ್ಥೆ ಮಾಡಲಾಗಿತ್ತು. ಈದ್ಗಾ ಮೈದಾನ ಬಳಿಯೂ ಕೆಲ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಸತತ ಒಂದು ತಿಂಗಳ ಕಾಲ ರೋಜಾ ಆಚರಿಸಿದ ಮುಸ್ಲಿಮರು ಪ್ರಾರ್ಥನೆ ಬಳಿಕ ವ್ರತಾಚರಣೆ ಕೈಬಿಟ್ಟರು. ಎಲ್ಲೆಡೆ ಸುಖ, ಶಾಂತಿ, ಪ್ರೀತಿ, ಸೌಹಾರ್ದ ನೆಲೆಸಲೆಂದು ಪ್ರಾರ್ಥಿಸಿದರು. ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ರಾಜಕೀಯ ಪಕ್ಷಗಳು ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯಗಳನ್ನು ಕೋರಿದರು.
ಬಿಗಿ ಭದ್ರತೆ: ಪ್ರಾರ್ಥನೆಗೆ ಎಲ್ಲ ಕಡೆಯಿಂದ ಏಕಕಾಲಕ್ಕೆ ಜನ ಆಗಮಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಗರದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ವಿಶಾಲ ಈದ್ಗಾ ಮೈದಾನ, ಪಕ್ಕದ ಹೆದ್ದಾರಿಯುದ್ದಕ್ಕೂ ಜನಸ್ತೋಮ ನೆರದಿತ್ತು. ಸಂಚಾರಕ್ಕೆ ಅಡಚಣೆಯಾಗದಂತೆ ಎಲ್ಲ ವಾಹನಗಳ ಓಡಾಟ ಬಂದ್ ಮಾಡಲಾಗಿತ್ತು. ಈದ್ಗಾ ಮೈದಾನ, ಆಸುಪಾಸಿನ ರಸ್ತೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಮಾಜಿ ಶಾಸಕ ಸೈಯ್ಯದ್ ಯಾಸೀನ್, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಪೌರಾಯುಕ್ತ ರಮೇಶ ನಾಯಕ, ತಹಶೀಲ್ದಾರ್ ಡಾ| ಹಂಪಣ್ಣ, ಮುಖಂಡರಾದ ಕೆ.ಶಾಂತಪ್ಪ, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ದೇವಣ್ಣ ನಾಯಕ, ಫಾರೂಕ್, ಮಹ್ಮದ್ ನೂರ್ ಸೇರಿ ಅನೇಕ ಮುಸ್ಲಿಂ ಸಮುದಾಯದ ಮುಖಂಡರು, ಮಕ್ಕಳು ಪಾಲ್ಗೊಂಡಿದ್ದರು.