ರಾಯಚೂರು: ಕೋಟ್ಯಂತರ ರೂ.ವ್ಯಯಿಸಿ ಮೂರ್ತರೂಪ ನೀಡುವ ಮುನ್ನವೇ ಉದ್ಘಾಟನೆಗೊಂಡ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಕಷ್ಟು ಕೆಲಸ ಬಾಕಿ ಉಳಿದಿವೆ. ಎಲ್ಲ ಕಾಮಗಾರಿ ನಿರ್ವಹಿಸಿ ಅಂತಿಮ ರೂಪ ನೀಡಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತೆ 5 ಕೋಟಿ ರೂ. ಅನುದಾನ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ಸಾಕಷ್ಟು ಕೆಲಸ ಬಾಕಿ ಇರುವಾಗಲೇ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲಿ ಕ್ರೀಡಾಂಗಣ ಉದ್ಘಾಟಿಸಿದ್ದರು. ಅದಾದ ಬಳಿಕ ಕಾಮಗಾರಿ ವೇಗ ಕಳೆದುಕೊಂಡಿತ್ತು. ಆದರೆ ಇತ್ತೀಚೆಗೆ ಕಾಮಗಾರಿ ವೀಕ್ಷಿಸಿದ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಅವೈಜ್ಞಾನಿಕ ಕಾಮಗಾರಿ ಕಂಡು ಸಿಡಿಮಿಡಿಗೊಂಡಿದ್ದರು.
ಎಲ್ಲ ಕಡೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಿರ್ವಹಿಸಿದರೆ ನೀವಿನ್ನೂ ಓಬೇರಾಯನ ಕಾಲದಲ್ಲೇ ಇದ್ದೀರಾ? ಕೂಡಲೇ ಎಲ್ಲವನ್ನೂ ಬದಲಿಸಿ ಎಂದು ಸೂಚಿಸಿದ್ದರು. ಇದೇ ನೆಪದಡಿ ಈಗ ಮತ್ತೂಂದಿಷ್ಟು ಕಾಮಗಾರಿಗಳ ನಿರ್ವಹಣೆಗೆ ಕೆಕೆಆರ್‌ಡಿಬಿಗೆ ಜಿಲ್ಲಾಡಳಿತ ಮತ್ತೂಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಸ್ಪಂದಿಸಿದ ಮಂಡಳಿ ಮತ್ತೆ 5 ಕೋಟಿ ರೂ. ನೀಡಿದೆ.
ಅವೈಜ್ಞಾನಿಕ ಕಾಮಗಾರಿ: ಎಲ್ಲ ಕಡೆ ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ನಿರ್ಮಿಸುತ್ತಿದ್ದರೆ ಇಲ್ಲಿ ಮಾತ್ರ ಮಣ್ಣಿನ ಟ್ರ್ಯಾಕ್ ನಿರ್ಮಿಸಲಾಗಿದೆ. ಗ್ಯಾಲರಿಗೆ ಸೂಕ್ತ ನೆರಳಿನ ವ್ಯವಸ್ಥೆ ಇಲ್ಲ. ಬಿಸಿಲು-ಮಳೆ ಬಂದರೆ ಪ್ರೇಕ್ಷಕರಿಗೆ ತೊಂದರೆ ಆಗುವಂತಿದೆ. ಇನ್ನು ಸುತ್ತಲೂ ಕ್ರೀಡಾಂಗಣ ಸ್ಥಳ ಒತ್ತುವರಿ ಆಗುತ್ತಿದ್ದರೂ ಭದ್ರತೆ ಕಲ್ಪಿಸಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದ್ದ ಪ್ರಾದೇಶಿಕ ಆಯುಕ್ತರು ಕೂಡಲೇ ಅದನ್ನು ಬದಲಿಸಬೇಕು. ಇಲ್ಲವಾದರೆ ಅಧಿ ಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಿದ್ದರು. ಅದರ ಜತೆಗೆ ಇನ್ನೂ ಹಲವು ಸಮಸ್ಯೆಗಳನ್ನು ಗುರುತಿಸಿದ ಅವರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಪ್ರಸ್ತಾವನೆಯಲ್ಲಿ ಏನಿತ್ತು?: ಸಾಕಷ್ಟು ಹಣ ವ್ಯಯಿಸಿದರೂ ಜಿಲ್ಲಾ ಕ್ರೀಡಾಂಗಣಕ್ಕೆ ಮೂರ್ತ ರೂಪ ನೀಡಲಾಗಿಲ್ಲ. ಹೀಗಾಗಿ ಬಾಕಿ ಕಾಮಗಾರಿಗಳ ಯೋಜನಾ ಪಟ್ಟಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮುಖ್ಯವಾಗಿ ಅತ್ಯಾಧುನಿಕ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ನೆರಳು ಒದಗಿಸಲು ಗ್ಯಾಲರಿಯ ಶೆಡ್ ವಿಸ್ತರಣೆ, ಮಳೆ ನೀರು ಕೊಯ್ಲು ಅಳವಡಿಕೆ, ಸ್ಥಳ ಒತ್ತುವರಿ ಆರೋಪ ಕೇಳಿ ಬಂದ ಕಾರಣ ಸುತ್ತಲೂ ಕಾಂಪೌಂಡ್ ನಿರ್ಮಾಣ, ಮೆಟ್ಟಿಲುಗಳಿಗೆ ಸ್ಲಾÂಬ್‌ಗಳ ಅಳವಡಿಕೆ, ಡ್ರಿಲ್ ಅಳವಡಿಕೆ, ಚೈನ್ ಲಿಂಕ್ ಮೆಸ್, ಸುತ್ತಲೂ ವಿದ್ಯುದ್ದೀಪಗಳ ವ್ಯವಸ್ಥೆ, ಪಾರ್ಕಿಂಗ್, ವಿಐಪಿ ಗ್ಯಾಲರಿ ನಿರ್ಮಾಣ, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಹೊಸ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.
ಒಂದೂವರೆ ತಿಂಗಳು ಸಿದ್ಧತೆ: ಪ್ರಾದೇಶಿಕ ಆಯುಕ್ತರ ಭೇಟಿ ಬಳಿಕ ಸಭೆ ನಡೆಸಿದ ಅಧಿಕಾರಿಗಳು, ಏನೆಲ್ಲ ಕೆಲಸ ಕಾರ್ಯ ನಿರ್ವಹಿಸಬೇಕೆಂಬ ಕುರಿತು ಸುದೀರ್ಘ ಚರ್ಚಿಸಿದ್ದಾರೆ. ಒಂದೂವರೆ ತಿಂಗಳು ಸಮಾಲೋಚಿಸಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ಈ ಬಾರಿಯೂ ಲೋಕೋಪಯೋಗಿ, ಕ್ಯಾಶುಟೆಕ್ ಸಂಸ್ಥೆಯವರೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆಂದು ತಿಳಿದು ಬಂದಿದೆ.
ವರ್ಷಾನುಗಟ್ಟಲೇ ಕಾಮಗಾರಿ ನಿರ್ವಹಿಸುತ್ತಲೇ ಇದ್ದರೂ ಇನ್ನೂ ಅಂತಿಮ ಸ್ವರೂಪ ನೀಡಲಾಗುತ್ತಿಲ್ಲ. ಮುಂಬರುವ ಆರ್ಥಿಕ ವರ್ಷದಲ್ಲಾದರೂ ಕ್ರೀಡಾಂಗಣಕ್ಕೆ ಹಿಡಿದ ಗ್ರಹಣ ಬಿಡುವುದೇ ನೋಡಬೇಕು.
ರಾಯಚೂರು ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಸಾಕಷ್ಟು ವರ್ಷಗಳಿಂದ ನಡೆಯುತ್ತಿದೆ. ಆದರೆ, ಆಗ ಸಾಕಷ್ಟು ಕೆಲಸಗಳಿಗೆ ಅನುಮೋದನೆ ಪಡೆದಿಲ್ಲ. ಇದರಿಂದ ಕಾಮಗಾರಿ ಮುಗಿದರೂ ಅದು ಅಪೂರ್ಣಗೊಂಡಂತೆಯೇ ಭಾಸವಾಗುತ್ತಿತ್ತು. ಬಾಕಿ ಉಳಿದ ಅಗತ್ಯ ಕಾಮಗಾರಿಗಳ ನಿರ್ವಹಣೆಗೆ ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮಂಡಳಿ ಸ್ಪಂದನೆ ನೀಡಿದ್ದು,5 ಕೋಟಿ ರೂ. ನೀಡಿದೆ. ಈಗ ಕೆಲಸದ ವೇಗ ಹೆಚ್ಚಿದೆ. ಐದಾರು ತಿಂಗಳಲ್ಲಿ ಕ್ರೀಡಾಂಗಣದ ಚಿತ್ರಣ ಸಂಪೂರ್ಣ ಬದಲಾಗಲಿದೆ.
ಆರ್.ವೆಂಕಟೇಶಕುಮಾರ,
ಜಿಲ್ಲಾಧಿಕಾರಿ ರಾಯಚೂರು
ಸಿದ್ಧಯ್ಯಸ್ವಾಮಿ ಕುಕುನೂರು