ರಾಯಚೂರು: ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಗುಳೆ ಹೋಗಿದ್ದ 50 ಸಾವಿರಕ್ಕೂ ಅಧಿಕ ಜನ ಮರಳಿ ಬಂದಿದ್ದು, ಎರಡು ತಿಂಗಳ ಪಡಿತರ ನೀಡಬೇಕಾದ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಗೆ ವಂಚಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ.
ಈಗಾಗಲೇ ಜಿಲ್ಲೆಯ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆಯಾದರೂ ಅಕ್ರಮಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಜಿಲ್ಲೆಯಲ್ಲಿ 19.20 ಲಕ್ಷ ಜನಸಂಖ್ಯೆಯಿದ್ದು, 715 ನ್ಯಾಯಬೆಲೆ ಅಂಗಡಿಗಳಿವೆ. 24 ಅಂಗಡಿ ಸ್ಥಗಿತಗೊಂಡಿದ್ದರೆ, ಮತ್ತೆ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. 53,035 ಅಂತ್ಯೋದಯ, 4,57 ಲಕ್ಷ ಬಿಪಿಎಲ್ , 6,719 ಎಪಿಎಲ್ ಕಾರ್ಡ್ದಾರರಿದ್ದಾರೆ. ಜಿಲ್ಲೆಗೆ ಈವರೆಗೂ 1.67 ಲಕ್ಷ ಕ್ವಿಂಟಲ್ ಅಕ್ಕಿ ಬಂದಿದೆ. ಐದು ದಿನದೊಳಗೆ 2 ತಿಂಗಳ ರೇಶನ್ ನೀಡಬೇಕೆಂದು ತಿಳಿಸಿದ್ದರೂ ಇನ್ನೂ ಮುಗಿದಿಲ್ಲ.
ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿಯೊಬ್ಬರಿಗೆ 5 ಕೆ.ಜಿ ಅಕ್ಕಿ, ಎರಡು ಕೆ.ಜಿ ಗೋದಿ ನೀಡಿದರೆ, ಅಂತ್ಯೋದಯ ಕಾರ್ಡ್‌ದಾರರಿಗೆ ತಿಂಗಳಿಗೆ 35 ಕೆ.ಜಿ ಅಕ್ಕಿ ನೀಡಬೇಕು. ಎರಡು ತಿಂಗಳ ಪಡಿತರ ಏಕಕಾಲಕ್ಕೆ ನೀಡಲಾಗುತ್ತಿದೆ. ಆದರೆ, ಸಾಕಷ್ಟು ಕಡೆ ಅಂತ್ಯೋದಯ ಕಾರ್ಡ್‌ದಾರರಿಗೆ ಕಡಿಮೆ ಧಾನ್ಯ ನೀಡಲಾಗುತ್ತಿದೆ. ಇನ್ನೂ ತೂಕದಲ್ಲೂ ಸಾಕಷ್ಟು ವ್ಯತ್ಯಾಸ ಮಾಡಲಾಗುತ್ತಿದೆ. ಕೆ.ಜಿ ಲೆಕ್ಕದಲ್ಲಿ ಹಾಕದೇ ಬಕೆಟ್, ಪ್ಲಾಸ್ಟಿಕ್ ಡಬ್ಬಿಗಳಲ್ಲೇ ಹಾಕಲಾಗುತ್ತಿದೆ. ಲಾಕ್‌ಡೌನ್ ಅವಕಾಶ ಬಳಸಿಕೊಂಡಿರುವ ರೇಶನ್ ಅಂಗಡಿ ಮಾಲೀಕರು ಗ್ರಾಹಕರಿಂದ 10-30 ರೂ.ವರೆಗೂ ಹಣ ಪಡೆಯುತ್ತಿದ್ದಾರೆ.
ದೇವದುರ್ಗ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ 100 ರೂ. ಪಡೆದಿರುವ ಕುರಿತು ವರದಿಯಾಗಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಜನ ಗುಂಪು ನಿಂತರೂ ತಿಳಿ ಹೇಳುವವರಿಲ್ಲ. ತಮಗೆ ತಿಳಿದಾಗ ಬಂದು ರೇಶನ್ ಹಾಕುತ್ತಿದ್ದಾರೆ.ಹೀಗಾಗಿ ಜನ ಬೆಳಗ್ಗೆಯಿಂದ ಸಂಜೆವರೆಗೂ ಕಾಯುವ ಸ್ಥಿತಿ ಇದೆ.
ಈಗಾಗಲೇ ಎರಡು ತಿಂಗಳ ರೇಶನ್ ನೀಡಲಾಗುತ್ತಿದೆ. ಗುಳೆ ಹೋಗಿ ಬಂದವರಲ್ಲಿ ಬಹುತೇಕರಿಗೆ ಬಿಎಪಿಎಲ್ ಕಾರ್ಡ್‌ಗಳಿವೆ. ಕಾರ್ಡ್ ಇಲ್ಲದವರಿಗೆ ಎಸ್ ಡಿಆರ್‌ಎಫ್‌ನಡಿ ಪಡಿತರ ನೀಡುತ್ತಿದ್ದೇವೆ. ಅಕ್ರಮ ನಡೆದಿರುವ ಬಗ್ಗೆ ಖಚಿತ ಮಾಹಿತಿ ನೀಡಿದರೆ ಅಂಥ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲೆಯ 3 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಈವರೆಗೂ ಶೇ.80ಕ್ಕೂ ಅಧಿಕ ಪಡಿತರ ವಿತರಿಸಲಾಗಿದೆ.
ಅರುಣಕುಮಾರ್ ಸಂಗಾವಿ,
ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ರಾಯಚೂರು