ರಾಯಚೂರು: ಸತತ ಬರದಿಂದ ಕಂಗೆಟ್ಟಾಗ ಅಬ್ಬರಿಸಿ ಸುರಿದ ಮಳೆರಾಯನ ಕಂಡು ಅತ್ತ ತಂದೆ ಖಷಿ ಪಡುತ್ತಿದ್ದರೆ, ಇತ್ತ ಅದೇ ಮಳೆಗೆ ಮನೆ ಗೋಡೆ ಕುಸಿದು ತನ್ನ ಮನೆ ನಂದಾದೀಪವೇ ಆರಿ ಹೋಗಿತ್ತು.
ಕಟ್ಟಿ ವರ್ಷ ಕಳೆಯುವುದರೊಳಗೆ ಬಾಳಿ ಬೆಳಗಬೇಕಿದ್ದ ಮಕ್ಕಳನ್ನೆ ಬಲಿ ಪಡೆಯಿತು ಆ ಯಮರೂಪಿ ಗೋಡೆ. ಒಂದೇ ದಿನದಲ್ಲಿ ಮೂವರು ಸಾವು ಕಂಡ ಮನೆಯಲ್ಲಿ ಈಗ ಕೇಳುತ್ತಿರುವುದು ಬರೀ ಆರ್ತನಾದವೊಂದೇ. ತಾಲೂಕಿನ ಕೊತ್ತದೊಡ್ಡಿಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಗಾಳಿಗೆ ಬ್ರಿಕ್ಸ್‌ನಿಂದ ಕಟ್ಟಿದ ಗೋಡೆ ಕುಸಿದು ಪಕ್ಕದಲ್ಲಿ ಮಲಗಿದ್ದವರ ಮೇಲೆರಗಿದೆ. ವೃದ್ಧೆ, ಎರಡು ಕಂದಮ್ಮಗಳು ಅಸುನೀಗಿದರೆ, ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಜೆ ಕಣ್ಣೆದುರೇ ಆಡಿಕೊಂಡಿದ್ದ ಮಕ್ಕಳು ಕತ್ತಲಾಗುವುದರೊಳಗೆ ಶಾಶ್ವತ ವಾಗಿ ಮರೆಯಾಗಿರುವುದು ಪಾಲಕರ ದುಃಖ ಮಡುಗಟ್ಟುವಂತೆ ಮಾಡಿತ್ತು. ಕೃಷಿ ಮಾಡಿ ಬದುಕು ದೂಡುವ ನರಸಿಂಹಲು, ಸುಜಾತಾರ ಐವರು ಮಕ್ಕಳಲ್ಲಿ ಇಬ್ಬರನ್ನು ಮಳೆರಾಯ ಕಿತ್ತುಕೊಂಡಿದ್ದಾನೆ. ಜತೆಗೆ ಮಕ್ಕಳ ಆರೈಕೆಗೆ ಬಂದಿದ್ದ ಸಂಬಂಧಿ ವೃದ್ಧೆಯೂ ಕಣ್ಮುಚ್ಚಿದ್ದಾಳೆ. ದುರ್ದೈವ ಎಂದರೆ ನಾಲ್ಕು ಹೆಣ್ಣು ಮಕ್ಕಳ ತರುವಾಯ ಜನಿಸಿದ ಗಂಡು ಮಗುವೇ ಹೆತ್ತವರಿಂದ ದೂರವಾಗಿದೆ. ಒಬ್ಬ ಮಗಳು ಅಜ್ಜಿ ಊರಿಗೆ ಹೋದ ಕಾರಣ ಅಪಾಯದಿಂದ ಪಾರಾಗಿದ್ದಾಳೆ.
ಕಳಪೆ ಕಾಮಗಾರಿ: ಚಿಕ್ಕ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದ ನರಸಿಂಹಲು ಕುಟುಂಬ ಕಳೆದ ವರ್ಷ ಬ್ರಿಕ್ಸ್‌ನಿಂದ ಗೋಡೆ ಕಟ್ಟಿಕೊಂಡಿತ್ತು. ಆದರೆ, ಅದಕ್ಕೆ ಸರಿಯಾಗಿ ಸಿಮೆಂಟ್ ಹಾಕಿ ಕ್ಯೂರಿಂಗ್ ಮಾಡದಿರುವುದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಿ ನಿರ್ಮಿಸಿಕೊಂಡಿದ್ದ ಗೋಡೆಯೇ ಯಮರೂಪಿಯಾಗಿ ಜೀವಗಳನ್ನೇ ತಿಂದು ಹಾಕಿದೆ. ಜೋರು ಗಾಳಿಗೆ ಏಕಕಾಲಕ್ಕೆ ಗೋಡೆ ನೆಲಕ್ಕುರುಳಿದ ಪರಿಣಾಮ ಅದರ ಕೆಳಗೆ ಮಲಗಿದ್ದ ಮಕ್ಕಳು ವೃದ್ಧರು ಸಿಲುಕಿ ಅಸುನೀಗಿದ್ದಾರೆ.
ನನ್ನ ಕೈ ಮೇಲೆ ಬಾಗಿಲು ಬಿತ್ತು: ಅತ್ತ ತಮ್ಮ ತಂಗಿ ಅಜ್ಜಿ ಸಂಸ್ಕಾರ ನಡೆಯುತ್ತಿದ್ದರೆ ಇತ್ತ ಹಿರಿ ಮಗಳು ತ್ರಿಶಾ ಆಸ್ಪತ್ರೆಯಲ್ಲಿ ಕಣ್ಣೀರಾಕುತ್ತ ಮಲಗಿದ್ದಳು. ಇಂದು ಶಾಲೆಯಲ್ಲಿ ಹೊಸ ಸಮವಸ್ತ್ರ, ಪಠ್ಯಪುಸ್ತಕ ನೀಡಿದ್ದರು. ಅದೇ ಖಷಿಯಲ್ಲಿ ಅಜ್ಜಿ ಜತೆ ಮಾತನಾಡುತ್ತ ಮಲಗಿದ್ದೆವು. ಅಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅಪ್ಪ ಹೊರಗೆ ಹೋಗಿದ್ದರು. ಜೋರು ಗಾಳಿಗೆ ಗೋಡೆ ಮೈ ಮೇಲೆಯೇ ಬಿತ್ತು. ನನ್ನ ಮೇಲೆ ಬಾಗಿಲು ಬಿತ್ತು. ಅದನ್ನು ಕೈಯಿಂದಲೇ ಹಿಡಿದುಕೊಂಡೇ. ಆದರೆ, ತಮ್ಮ, ತಂಗಿ ಅಜ್ಜಿ ಮೇಲೆ ಬೂದಿ ಎಳ್ಳೆಗಳು ಬಿದ್ದವು ಎಂದು ಕಣ್ಣೀರಾಗುತ್ತಾಳೆ.
ಒಂದೆಡೆ ಆಲಿಕಲ್ಲು ಮಳೆಗೆ ಇಳೆ ತಂಪಾಗಿ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದ್ದರೆ, ನರಸಿಂಹಲು ಮನೆಯಲ್ಲಿ ಮಾತ್ರ ಶೋಕ ಆವರಿಸಿದೆ. ಹಸುಗೂಸುಗಳನ್ನು ಬಲಿ ಪಡೆದ ವರುಣನಿಗೆ ಹಿಡಿಶಾಪ ಹಾಕದವರಂತೂ ಇಲ್ಲ.