Advertisement

ಸಂಶಯಾಸ್ಪದ ನಕಲಿ ಕೃಷಿ ಪರಿಕರ ವಶಕ್ಕೆ

03:02 PM Aug 30, 2019 | Team Udayavani |

ರಾಯಚೂರು: ಕೃಷಿಗೆ ಬಳಸುವ ರಾಸಾಯನಿಕ, ಕ್ರಿಮಿನಾಶಕಗಳಲ್ಲಿ ನಕಲಿ ಕಂಪನಿಗಳ ಹಾವಳಿ ಕಂಡುಬಂದಿದ್ದು, ಈ ವಿಚಾರವಾಗಿ ನಡೆಸಿದ ದಾಳಿಯಲ್ಲಿ ಕಂಡುಬಂದ ಸಂಶಯಾಸ್ಪದ 10 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬೆಂಗಳೂರಿನ ಕೃಷಿ ಇಲಾಖೆಯ ಜಾಗೃತ ಕೋಶದ ಅಪರ ನಿರ್ದೇಶಕ ಅನೂಪ್‌ ತಿಳಿಸಿದರು.

Advertisement

ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಚಟುವಟಿಕೆಗಳು ಬಿರುಸುಗೊಂಡಿದ್ದು, ಕೃಷಿ ಪರಿಕರಗಳ ಗುಣ ನಿಯಂತ್ರಣ ಪರೀಕ್ಷಿಸಲು ಕೃಷಿ ಪರಿಕರ ಮಳಿಗೆಳಿಗೆ ಹಠಾತ್‌ ದಾಳಿ ನಡೆಸಲಾಯಿತು. ಈ ವೇಳೆ ಅನಧಿಕೃತ ಕಂಪನಿಗಳ ಕ್ರಿಮಿನಾಶಕಗಳು ಕಂಡು ಬಂದರೆ, ಕೆಲವೊಂದು ಜೈವಿಕ ಮಾದರಿ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಅಂಶ ಪತ್ತೆಯಾಗಿದೆ. ಆದರೆ, ಜೈವಿಕ ಮಾದರಿ ಹೆಸರಿನಲ್ಲೂ ನಕಲಿ ಕ್ರಿಮಿನಾಶಕ ಮಾರುವ ಸಂಶಯ ಬಂದಿದೆ. ಅಂಥ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಕೃಷಿ ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ಇಲಾಖೆಯಿಂದ ಪರವಾನಗಿ ಪಡೆದ ಉತ್ಪಾದಕರಿಂದಲೇ ಖರೀದಿಸಬೇಕು. ಪರವಾನಗಿ ಇಲ್ಲದ ಮಳಿಗೆಗಳಲ್ಲಿ ರೈತರು ಖರೀದಿಸಲೇಬಾರದು ಎಂದು ಜಾಗೃತಿ ಮೂಡಿಸಲಾಗಿದೆ ಎಂದರು.

ಸುಮಾರು 54 ರಸಗೊಬ್ಬರ ಹಾಗೂ ಪೀಡೆನಾಶಕ ಮಾರಾಟ ಮಳಿಗೆಗಳಿಗೆ ಪರಿವೀಕ್ಷಕರು ಭೇಟಿ ನೀಡಿದ್ದರು. ಪರವಾನಗಿ ಪಡೆಯದೇ ಮಾರುತ್ತಿದ್ದ 86 ಜೈವಿಕ ಪೀಡೆನಾಶಕಗಳು, ಸಸ್ಯ ಸಂವರ್ಧಕಗಳು ಪತ್ತೆಯಾಗಿದ್ದು ಒಟ್ಟು 1576.45 ಲೀಟರ್‌ ದಾಸ್ತಾನು ಮಾಡಿದ್ದ ವಿವಿಧ ಕೃಷಿ ಪರಿಕರಗಳ ಮಾರಾಟಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿದರು.

ವಿವಿಧ ಕೃಷಿ ಪರಿಕರಗಳ ಉತ್ಪಾದಕ ಸಂಸ್ಥೆಯ ಪ್ರತಿನಿಧಿಗಳ ಪರವಾನಗಿ ಪಡೆದಿರುವ ಕುರಿತು ಖಾತರಿಪಡಿಸಿಕೊಂಡು ನಂತರ ಪರಿಕರಗಳನ್ನು ಸರಬರಾಜು ಮಾಡಬೇಕಿದೆ. ರೈತರು ಕೂಡ ಯಾವುದೇ ಕೃಷಿ ಪರಿಕರ ಖರೀದಿಸುವಾಗ ಜಾಗೃತರಾಗಿರಬೇಕು. ಪರವಾನಗಿ ಹೊಂದಿದವರ ಬಳಿ ಮಾತ್ರ ಖರೀದಿಸಬೇಕು. ಹಣ ಪಾವತಿಸಿದ ರಶೀದಿ ಪಡೆದು ತೆಗೆದಿಡಬೇಕು ಎಂದು ತಿಳಿಸಿದರು.

Advertisement

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ, ಬಿಟಿ ಹತ್ತಿಗೆ ಕಾಯಿಕೊರಕ ರೋಗ ಬರುವ ಕಾರಣ ರೈತರು ಅದರ ಜತೆಗೆ ಬಲೆ ಬೆಳೆ ಕೂಡ ಬೆಳೆಯಬೇಕು ಎಂದು ತಿಳಿಸಲಾಗಿದೆ. ಆದರೆ, ಸಾಕಷ್ಟು ರೈತರು ಅದನ್ನು ಬೆಳೆಯದ ಕಾರಣ ರೋಗ ಮತ್ತೆ ಹರಡುತ್ತದೆ. 90 ದಿನ ಆದ ಕೂಡಲೇ ಬಿಟಿ ಹತ್ತಿಯಲ್ಲಿರುವ ಶಕ್ತಿ ಕುಗ್ಗಲಿದೆ. ಇದರಿಂದ ಕಾಯಿಲೆ ಸುಲಭವಾಗಿ ಹರಡಲಿದೆ. ಅದಲ್ಲದೇ, ಗುಲಾಬಿ ಕಾಯಿಕೊರಕ ರೋಗ ಭೂಮಿಯಲ್ಲಿ ಸೇರಿದ ಕನಿಷ್ಠ ಮೂರು ವರ್ಷವಾದರೂ ಅದು ನಿರ್ನಾಮವಾಗುವುದಿಲ್ಲ. ಈ ಎಲ್ಲ ಕಾರಣದಿಂದ ರೈತರು ಎಚ್ಚರಿಕೆ ವಹಿಸಲೇಬೇಕು ಎಂದರು. ಜಾಗೃತಿ ಕೋಶದ ಜಂಟಿ ನಿರ್ದೇಶಕ ಶಿವನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next