Advertisement

ಮರಳಿ ಮನೆಯತ್ತ ಸಂತ್ರಸ್ತರ ಹೆಜ್ಜೆ

01:05 PM Aug 16, 2019 | Naveen |

ರಾಯಚೂರು: ಕೃಷ್ಣಾ ನದಿ ಪ್ರವಾಹ ದಿನೇದಿನೆ ಕ್ಷೀಣಿಸುತ್ತಿದ್ದು, ಗುರುವಾರ ಕೂಡ ನಾರಾಯಣಪುರ ಜಲಾಶಯದಿಂದ ನದಿಗೆ 5.50 ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದರೂ ನದಿ ಪ್ರವಾಹ ಮಾತ್ರ ಇಳಿಮುಖವಾಗಿದೆ.

Advertisement

ಗುರುವಾರ ಬೆಳಗ್ಗೆ 5.80 ಲಕ್ಷ ಕ್ಯೂಸೆಕ್‌ ಹರಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಆ ಪ್ರಮಾಣ 5.50 ಲಕ್ಷ ಕ್ಯೂಸೆಕ್‌ಗೆ ಬಂದಿತ್ತು. ಕೆಲ ಹಳ್ಳಿಗಳು ಪ್ರವಾಹಮುಕ್ತವಾಗಿದ್ದು, ಗ್ರಾಮಸ್ಥರು ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಜಿಲ್ಲಾಡಳಿತ 9 ಪರಿಹಾರ ಕೇಂದ್ರಗಳನ್ನು ಸ್ಥಗಿತಗೊಳಿಸಿದೆ. ಅಂಚೆಸೂಗುರು, ವಡಗಂಬಳಿ, ಗೋಪಾಲಪುರ, ನಿಲುವಂಜಿ, ವೀರಗೋಟ, ಪರ್ತಪುರ, ಹೇರುಂಡಿ, ಮುದ್ಗೋಟ್, ಮದರಕಲ್ ಪರಿಹಾರ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಕೇಂದ್ರಗಳನ್ನು ಮುಂದುವರಿಸಲಾಗಿದೆ.

ಇನ್ನು ಆಲಮಟ್ಟಿಗೆ ಒಳಹರಿವು ಕೇವಲ 3 ಲಕ್ಷ ಕ್ಯೂಸೆಕ್‌ ಆಗಿದ್ದು, ಶುಕ್ರವಾರ ಇಲ್ಲವೇ ಶನಿವಾರದ ಒಳಗೆ ನದಿ ಪ್ರವಾಹ ಗಣನೀಯವಾಗಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಬಳಿಕ ಜಿಲ್ಲಾಡಳಿತ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಹಾಳಾದ ರಸ್ತೆಗಳನ್ನು ತಾತ್ಕಾಲಿಕ ದುರಸ್ತಿ ಮಾಡುತ್ತಿದೆ. ಜಲದುರ್ಗ ಸೇತುವೆ ಬಳಿ ಪ್ರವಾಹದಿಂದ ಕೊಚ್ಚಿ ಹೋದ ರಸ್ತೆಯಲ್ಲಿ ಮರಂ ಹಾಕಿಸಿ ಸಮತಟ್ಟು ಮಾಡುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹಾನಿ ಬಗ್ಗೆ ಸಮೀಕ್ಷೆ ಆರಂಭಿಸಿದ್ದು, ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ನಾಲ್ಕು ಸಾವಿರ ಆಹಾರ ಕಿಟ್‌ಗಳನ್ನು ತಯಾರಿಸುತ್ತಿದ್ದು, ನಿರಾಶ್ರಿತರಿಗೆ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next