Advertisement

ತೊಗರಿ ಖರೀದಿಗೆ ಮಿತಿ; ಬೆಳೆಗಾರರಿಗೆ ಸಮಸ್ಯೆ

12:08 PM Jan 26, 2020 | Naveen |

ರಾಯಚೂರು: ರೈತರ ಅನುಕೂಲಕ್ಕಾಗಿ ಆರಂಭಿಸಿದ ತೊಗರಿ ಖರೀದಿ ಕೇಂದ್ರಗಳು ಮಧ್ಯಮ ವರ್ಗದ ಕೃಷಿಕರಿಗೆ ಮಾತ್ರ ಅಷ್ಟೇನು ಲಾಭ ತರುತ್ತಿಲ್ಲ. ಒಂದು ಪಹಣಿಗೆ ಕೇವಲ 10 ಕ್ವಿಂಟಲ್‌ ಮಾತ್ರ ಖರೀದಿಸುವ ನಿಯಮದಿಂದ ಹೆಚ್ಚು ತೊಗರಿ ಬೆಳೆದವರು ಸಮಸ್ಯೆ ಎದುರಿಸುವಂತಾಗಿದೆ.

Advertisement

ಜಿಲ್ಲೆಯಲ್ಲಿ ಈ ಬಾರಿ 31 ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದಿಂದ 5800, ರಾಜ್ಯ ಸರ್ಕಾರದ 300 ಸಹಾಯಧನ ಸೇರಿಸಿ ಕ್ವಿಂಟಲ್‌ಗೆ 6100 ರೂ. ಬೆಲೆ ನಿಗದಿ ಮಾಡಲಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ 3 ಸಾವಿರ ರೂ.ದಿಂದ 5 ಸಾವಿರ ರೂ.ಗೆ
ಖರೀದಿಸಲಾಗುತ್ತಿದೆ. ಇದರಿಂದ ರೈತರು ಪ್ರತಿ ಕ್ವಿಂಟಲ್‌ಗೆ 1,100ರಿಂದ 2 ಸಾವಿರ ರೂ. ನಷ್ಟ ಎದುರಿಸುವಂತಾಗಿದೆ. ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ತೊಗರಿ ಬೆಳೆ ಪ್ರಧಾನವಾಗಿದೆ. ಅದರಲ್ಲೂ ಕಲಬುರಗಿ ತೊಗರಿ ಖಣಜವಾದರೆ,
ರಾಯಚೂರು, ಯಾದಗಿರಿಯಲ್ಲೂ ದೊಡ್ಡ ಪ್ರಮಾಣದಲ್ಲೇ ಬೆಳೆಯಲಾಗುತ್ತಿದೆ.

ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ, ಹಿಂಗಾರು ಕೈ ಹಿಡಿದಿದೆ. ಜಿಲ್ಲೆಯಲ್ಲಿ 47,521 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿಯಿದ್ದರೆ, 62,666 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅಂದರೆ ನಿರೀಕ್ಷೆಗಿಂತ ಶೇ.31ರಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಉತ್ತಮ ಇಳುವರಿ: ಕಳೆದ ವರ್ಷ ಭೀಕರ ಬರದಿಂದ ರೈತರು ಸಂಪೂರ್ಣ ನಷ್ಟಕ್ಕೀಡಾಗಿದ್ದರು. ಎಕರೆಗೆ ಒಂದು ಕ್ವಿಂಟಲ್‌ ಕೂಡ ಇಳುವರಿ ಬಂದಿರಲಿಲ್ಲ. ಈ ಬಾರಿ ಮುಂಗಾರು ಮಳೆ ಕೊನೆಯಲ್ಲಿ ಕೈ ಹಿಡಿಯಿತು. ಹಿಂಗಾರು ಮಳೆ ಬೆಳೆಗೆ ಆಸರೆಯಾಯಿತು. ಇದರಿಂದ ಎಕರೆಗೆ
4-6 ಕ್ವಿಂಟಲ್‌ವರೆಗೂ ಇಳುವರಿ ಬಂದಿದೆ. ಇನ್ನೂ ನೀರು ಕಟ್ಟಿದ ರೈತರಿಗೆ 10-12 ಕ್ವಿಂಟಲ್‌ ಬೆಳೆ ದಕ್ಕಿದೆ. 4-5 ಎಕರೆ ಹೊಂದಿದ ಮಧ್ಯಮ ವರ್ಗದ ರೈತರೇ 25-30 ಕ್ವಿಂಟಲ್‌ ತೊಗರಿ ಬೆಳೆದಿದ್ದಾರೆ. ಸರ್ಕಾರ ಮಾತ್ರ ಕೇವಲ 10 ಕ್ವಿಂಟಲ್‌ ಖರೀದಿಸುತ್ತಿರುವುದು ಸಮಸ್ಯೆ ತಂದೊಡ್ಡಿದೆ.

ಸಾವಿರಾರು ರೂ. ನಷ್ಟ: ಈಗ ಮಾರುಕಟ್ಟಗೆ ತೊಗರಿ ಬೆಳೆ ದಾಂಗುಡಿ ಇಡುತ್ತಿದೆ. ಇಲ್ಲಿನ ರಾಜೇಂದ್ರ ಗಂಜ್‌ಗೆ ನಿತ್ಯ 8-11 ಸಾವಿರ ಕ್ವಿಂಟಲ್‌ವರೆಗೂ ತೊಗರಿ ಆವಕವಾಗುತ್ತಿದೆ. ಗುರುವಾರ 8,485 ಕ್ವಿಂಟಲ್‌ ಬಂದಿದೆ. ಕಳೆದ ನಾಲ್ಕೆ çದು ದಿನಗಳಿಂದ ಬೆಲೆ ಮಾತ್ರ 3 ಸಾವಿರದಿಂದ 5,100 ಆಸುಪಾಸು ಇದೆ. ಅಂದರೆ ಖರೀದಿ ಕೇಂದ್ರಕ್ಕಿಂತ ಒಂದು ಸಾವಿರ ರೂ. ಕಡಿಮೆ ಇದೆ. ಅಲ್ಲದೇ, ಕಾಳು ತುಸು ಟೊಳ್ಳಾದರೂ ವರ್ತಕರು ದರ ಕಡಿಮೆ ಮಾಡುತ್ತಾರೆ.

Advertisement

20 ಕ್ವಿಂಟಲ್‌ ಖರೀದಿಗೆ ಒತ್ತಾಯ: ಈ ಭಾಗದಲ್ಲಿ ಬಡ ರೈತರಿಗೂ 2-3 ಎಕರೆ
ಜಮೀನಿದೆ. ಮಧ್ಯಮ ವರ್ಗದವರಿಗೆ 5-10 ಎಕರೆ ಜಮೀನಿರುವುದು ಸಾಮಾನ್ಯ. ಹೀಗಾಗಿ ಸರ್ಕಾರ ಕನಿಷ್ಟ 20 ಕ್ವಿಂಟಲ್‌ ತೊಗರಿ ಖರೀದಿಗೆ ಮುಂದಾಗಬೇಕು. ಇದರಿಂದ ರೈತರಿಗೆ
ಆಗುವ ಅನ್ಯಾಯ ತಪ್ಪಲಿದೆ. ಅಲ್ಲದೇ 10 ಕ್ವಿಂಟಲ್‌ ಖರೀದಿ ಕೇಂದ್ರದಲ್ಲಿ ಉಳಿದ ತೊಗರಿಯನ್ನು ಎಪಿಎಂಸಿಗೆ ತೆಗೆದುಕೊಂಡು ಹೋಗುವ ತಾಪತ್ರಯ ತಪ್ಪಲಿದೆ. ಸಾಕಷ್ಟು ರೈತರು ಈ ಜಂಜಾಟವೇ ಬೇಡ. ಹೇಗಿದ್ದರೂ ಸರ್ಕಾರದಿಂದ ಹಣ ಸಂದಾಯವಾಗುವುದು
ತಡವಾಗುವುದರಿಂದ ಮುಕ್ತ ಮಾರುಕಟ್ಟೆಯಲ್ಲೇ ಮಾರುವುದು ಸೂಕ್ತ ಎಂಬ ನಿಲುವಿಗೆ ಬರುತ್ತಿದ್ದಾರೆ.

ಈ ಬಾರಿ ತೊಗರಿ ಇಳುವರಿ ಚೆನ್ನಾಗಿ ಬಂದಿದೆ. ಸಣ್ಣ ಪುಟ್ಟ ರೈತರೇ 20-30 ಕ್ವಿಂಟಲ್‌ ಬೆಳೆದಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ ಕೇವಲ 10 ಕ್ವಿಂಟಲ್‌ ಖರೀದಿಸಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲ. ಸರ್ಕಾರವೇ 20 ಪ್ರತಿ ರೈತನಿಂದ 20 ಕ್ವಿಂಟಲ್‌ ಖರೀದಿಸಬೇಕು. ಈ ಕುರಿತು ಈಗಾಗಲೇ ಉಸ್ತುವಾರಿ ಸಚಿವರಿಗೂ ಮನವಿ ನೀಡಲಾಗಿತ್ತು. ಆದರೆ, ಪ್ರಯೋಜನವಾಗಿಲ್ಲ.
ಲಕ್ಷ್ಮಣಗೌಡ ಕಡಗಂದೊಡ್ಡಿ,
ರೈತ ಸಂಘದ ಜಿಲ್ಲಾಧ್ಯಕ್ಷ 

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next