ರಾಯಚೂರು: ಕೋವಿಡ್-19ನ ನಿಯಮಾವಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳು ಪ್ರಕಟಗೊಂಡಿದ್ದು, ಕ್ವಾರಂಟೈನ್‌ನಲ್ಲಿರುವ ಶಂಕಿತರ ವರದಿ ನೆಗೆಟಿವ್ ಬಂದಲ್ಲಿ ತಕ್ಷಣವೇ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ನಿರ್ದೇಶನ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಕೆಲವೊಂದು ಪ್ರಮುಖ ಬದಲಾವಣೆ ಮಾಡಿ ಸ್ಟಾಂಡರ್ಡ್ ಆಪರೇಶನ್ ಪ್ರೋಸಿಜರ್ ಬಿಡುಗಡೆ ಮಾಡಿದೆ. ಶಂಕಿತರ ಗಂಟಲು ದ್ರವ ಪರೀಕ್ಷೆಯನ್ನು ಕೂಡಲೇ ನಿರ್ವಹಿಸಬೇಕು. ಕ್ವಾರಂಟೈನ್ ಅವಧಿ 7 ದಿನಗಳಾಗಿದ್ದು, ಅಷ್ಟರೊಳಗೆ ವರದಿ ಲಭ್ಯವಾಗಿ ನೆಗೆಟಿವ್ ಎಂದಾದಲ್ಲಿ ತಕ್ಷಣ ಬಿಡುಗಡೆ ಮಾಡಬಹುದು ಎಂದು ಹೇಳಿದರು.
ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ ಪಾಸ್ ಹೊಂದಿರಬೇಕು. ಈಗಾಗಲೇ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಎಲ್ಲರ ಮಾದರಿಗಳನ್ನು ಸಂಗ್ರಹಿಸಿದ್ದು, ಅವುಗಳಲ್ಲಿ ಕೆಲವು ಫಲಿತಾಂಶ ಬರಬೇಕಿದೆ. ಬೇರೆ ರಾಜ್ಯಗಳಿಂದ ಅನಧಿಕೃತವಾಗಿ ಬಂದವರನ್ನೂ ಕ್ವಾರಂಟೈನ್ ಮಾಡಬೇಕು ಎಂದು ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಮಾತನಾಡಿ, ಈವರೆಗೆ ಜಿಲ್ಲೆಯಲ್ಲಿ 71 ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ನಿತ್ಯ 1000-1200 ಶಂಕಿತರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಶೇ.21ರಷ್ಟು ಹೆಚ್ಚು ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಗೆ ಮತ್ತೆ ಪ್ರವಾಹ ಭೀತಿ ಎದುರಾಗಬಹುದು. ಅದನ್ನು ನಿಭಾಯಿಸಲು ಸಿದ್ಧರಾಗಬೇಕು. ಕಳೆದ ವರ್ಷ ಪ್ರವಾಹದ ವೇಳೆ ಆರು ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಅದಕ್ಕಾಗಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರವಾಹದಿಂದ ಜೀವಸಂಕುಲ ರಕ್ಷಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಜೂ.15ರೊಳಗೆ ಸಭೆ ನಡೆಸಬೇಕು. ಪ್ರವಾಹ ಸ್ಥಿತಿ ಮರುಕಳಿಸಿದರೆ ನದಿಪಾತ್ರದ ಗ್ರಾಮಸ್ಥರಲ್ಲಿ ತಿಳಿಸಿ ಸ್ಥಳಾಂತರಿಸಬೇಕು. ನಂತರ ಅವರ ವಸತಿಗಾಗಿ ಆಶ್ರಯ ಕೇಂದ್ರಗಳನ್ನು ತೆರೆಯಬೇಕು. ಅಲ್ಲಿ ಅವರಿಗೆ ಊಟ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು. ನಂತರ ತುರ್ತಾಗಿ ಎಂಡಿಆರ್‌ಎಫ್ ಮಾರ್ಗಸೂಚಿಗಳನ್ವಯ ಪರಿಹಾರ ನೀಡಬೇಕು ಎಂದು ಹೇಳಿದರು.
ಪ್ರವಾಹದ ವೇಳೆ ಬೋಟ್ ಹಾಗೂ ಲೈಫ್ ಜಾಕೆಟ್‌ಗಳನ್ನು ಸಿದ್ಧಪಡಿಸಬೇಕು. ಜಿಲ್ಲೆಯಲ್ಲಿರುವ ಮೂರು ನಡುಗಡ್ಡೆಗಳಲ್ಲಿ ಸಿಲುಕಿದವರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಲು ಕ್ರಮವಹಿಸಬೇಕು. ಅಲ್ಲದೇ ಅವರನ್ನು ಶಾಶ್ವತವಾಗಿ ಸ್ಥಳಾಂತರಿಸಲು ಪರ್ಯಾಯ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ 38,447 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಈಗಾಗಲೇ 32,385 ಕ್ವಿಂಟಲ್ ಲಭ್ಯವಿದೆ. ಅಗತ್ಯಕ್ಕೆ ತಕ್ಕಂತೆ ಉಳಿದ ಬಿತ್ತನೆ ಬೀಜ ಪೂರೈಕೆಯಾಗಲಿದೆ. ಮುಂಗಾರು ಹಂಗಾಮಿಗೆ 1,71,917 ಮೆಟ್ರಿಕ್ ಟನ್‌ಗಳ ರಸಗೊಬ್ಬರ ಬೇಡಿಕೆ ಇದ್ದು, ಪ್ರಸ್ತುತ 81,203.64 ಮೆಟ್ರಿಕ್ ಟನ್ ಗಳಷ್ಟು ರಸಗೊಬ್ಬರ ದಾಸ್ತಾನಿದೆ. ಉಳಿದ ರಸಗೊಬ್ಬರ ಜೂನ್ ಮೊದಲನೇ ವಾರದೊಳೆಗೆ ಪೂರೈಕೆಯಾಗಲಿದೆ ಎಂದು ವಿವರಿಸಿದರು. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ ಜಿ., ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಎಡಿಸಿ ದುರುಗೇಶ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು .