ರಾಯಚೂರು: ಇಷ್ಟು ದಿನ ಕೇವಲ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೋವಿಡ್ ವೈರಸ್ ಈಗ ಕರ್ತವ್ಯನಿರತ ಸಿಬ್ಬಂದಿಗೂ ತಗಲುತ್ತಿದೆ. ಇಲ್ಲಿನ ಒಪೆಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ನರ್ಸ್ ಗಳು ಸೇರಿ 14 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಕಳೆದ ಮೂರು ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೇ ನೆಮ್ಮದಿಯಿಂದಿದ್ದ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಹಾವಳಿ ಶುರುವಾದಂತಾಗಿದೆ. ಈ ಕುರಿತು ಗುರುವಾರ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ನಗರದ ರಿಮ್ಸ್‌ನ ನಾಲ್ವರು ಸ್ಟಾಫ್ ನರ್ಸ್ ಹಾಗೂ ಇಬ್ಬರು ಕಚೇರಿ ಸಹಾಯಕರಿಗೂ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದಿಂದ ಹಿಂತಿರುಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಮೂವರು, ನಗರದ ಗೋಲ್ ಮಾರ್ಕೆಟ್ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಸ್ಕಿಯ ಮಹಿಳೆಗೆ ಸೋಂಕು ತಗುಲಿದೆ. ಮತ್ತೊಂದು ಐಎಲ್‌ಐ ಪ್ರಕರಣ ಸೇರಿ 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 375 ಪ್ರಕರಣ ದೃಢಪಟ್ಟಂತಾಗಿದೆ. ಸೋಂಕಿತರ ಪೈಕಿ 82 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ವಿವರಿಸಿದರು.
ನಗರದ ರಿಮ್ಸ್‌ನಲ್ಲಿ ಜೂ.9ರ ಸಂಜೆ 7ಕ್ಕೆ ಮಾನ್ವಿ ತಾಲೂಕಿನ ಹರವಿ ಗ್ರಾಮದ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಹಾಗೂ ಬಹು ಅಂಗವೈಫಲ್ಯದಿಂದ ಮೃತಪಟ್ಟಿದ್ದಾಗಿ ಜಿಲ್ಲಾ ಮಟ್ಟದ ತಜ್ಞರ ಸಮಿತಿ ತಿಳಿಸಿದೆ. ಜೂನ್ 6 ರಂದು ಅವರನ್ನು ರಿಮ್ಸ್ ಗೆ ದಾಖಲಿಸಲಾಗಿತ್ತು. ಜೂ.9ರಂದು ಅವರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗ ಕಳುಹಿಸಲಾಗಿತ್ತು. ಇಂದು ಇವರ ಫಲಿತಾಂಶ ಬಂದಿದ್ದು, ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ಅವರ ಅಂತ್ಯ ಸಂಸ್ಕಾರವನ್ನು ಕೋವಿಡ್-19 ಶಿಷ್ಟಾಚಾರದಂತೆ ನೆರವೇರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಸೋಂಕಿತ ಆರು ಜನ ರಿಮ್ಸ್ ಸಿಬ್ಬಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ 140 ಜನರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 186 ವರದಿ ನೆಗೆಟಿವ್ ಬಂದಿವೆ. ಈವರೆಗೆ 17,897 ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಅವುಗಳಲ್ಲಿ 16,151 ವರದಿಗಳು ನೆಗೆಟಿವ್ ಆಗಿವೆ. ಉಳಿದ 1,366 ಸ್ಯಾಂಪಲ್ ಗಳ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್ ಗಳಲ್ಲಿಂದು 391 ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.