Advertisement

ಕೋವಿಡ್‌-19 ಪ್ರಯೋಗಾಲಯ ಶೀಘ್ರ ಆರಂಭ

07:17 PM May 16, 2020 | Naveen |

ರಾಯಚೂರು: ಹೆಚ್ಚುತ್ತಿರುವ ಕೋವಿಡ್ ಶಂಕಿತರ ಮಾದರಿ ಪರೀಕ್ಷಿಸಲು ನಗರದ ರಿಮ್ಸ್‌ನಲ್ಲೇ ಪ್ರಯೋಗಾಲಯ ಸ್ಥಾಪಿಸುತ್ತಿದ್ದು, ಶೀಘ್ರದಲ್ಲೇ ಕಾರ್ಯಾರಂಭಿಸುವ ಸಾಧ್ಯತೆಗಳಿವೆ. ಈಗಾಗಲೇ ಬಹುತೇಕ ಯಂತ್ರೋಪಕರಣ ಬಂದಿದ್ದು, ಜೋಡಣೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಈವರೆಗೂ 3092ಕ್ಕೂ ಅಧಿಕ ಕೋವಿಡ್ ಶಂಕಿತರ ಗಂಟಲಿನ ದ್ರವ್ಯ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಆರಂಭದಲ್ಲಿ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಈಗ ಬಳ್ಳಾರಿ ಹಾಗೂ ಕಲಬುರಗಿಗೆ ಕಳುಹಿಸಲಾಗುತ್ತಿದೆ. ಸರ್ಕಾರ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಪ್ರಯೋಗಾಲಯ ಸ್ಥಾಪಿಸುವ ಚಿಂತನೆಯಲ್ಲಿದ್ದು, ಅದರಂತೆ ನಗರದ ರಿಮ್ಸ್‌ ಆಡಳಿತ ಭವನ ಕಚೇರಿಯಲ್ಲಿ ಸ್ಥಾಪಿಸಲಾಗುತ್ತಿದೆ.

Advertisement

ಒಂದು ಪ್ರಯೋಗಾಲಯ ಸ್ಥಾಪನೆಗೆ ಏನಿಲ್ಲವೆಂದರೂ ಒಂದು ಕೋಟಿ ರೂ. ಹಣ ಬೇಕಿದ್ದು, ಜಿಲ್ಲಾಡಳಿತ ಎಸ್‌ಡಿಆರ್‌ಎಫ್‌ನಿಂದ 50 ಲಕ್ಷ ರೂ. ಮಂಜೂರು ಮಾಡಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಕೆಲವೊಂದು ಯಂತ್ರೋಪಕರಣ ಸರಬರಾಜು ಮಾಡಿದ್ದು, ರಿಮ್ಸ್‌ ಆಡಳಿತ ಮಂಡಳಿ ಕೂಡ ಒಂದಷ್ಟು ಹಣ ನೀಡಿದೆ. ಈಗಾಗಲೇ ಎಲ್ಲ ರೀತಿಯ ಯಂತ್ರೋಪಕರಣಗಳು ಬಂದಿದ್ದು, ಅಳವಡಿಕೆಯೊಂದೇ ಬಾಕಿ ಇದೆ. ಕ್ಯಾಶುಟೆಕ್‌ ಸಂಸ್ಥೆಗೆ ಸಿವಿಲ್‌ ಕೆಲಸಗಳನ್ನು ನೀಡಲಾಗಿದೆ.

ಕೇವಲ ಕೋವಿಡ್ ಮಾತ್ರವಲ್ಲ: ಇದು ಕೇವಲ ಕೋವಿಡ್‌ -19ಗಾಗಿ ತಯಾರಿಸುತ್ತಿರುವ ಪ್ರಯೋಗಾಲಯವಲ್ಲ. ನಮಗೆ ಬೇಕಾದ ಎಲ್ಲ ರೀತಿಯ ವೈರಸ್‌ಗಳ ತಪಾಸಣೆ ಕೂಡ ಇಲ್ಲಿ ಮಾಡಬಹುದಾಗಿದೆ. ಯಾವುದೇ ವೈರಾಣು ಬಂದರೂ ಅದಕ್ಕೆ ಸಂಬಂಧಿ ಸಿದ ಕಿಟ್‌ಗಳು ಬಂದರೆ ಸಾಕು ಪರೀಕ್ಷೆ ಮಾಡಬಹುದು ಎಂದು ವಿವರಿಸುತ್ತಾರೆ ರಿಮ್ಸ್‌ ಅಧಿಕಾರಿಗಳು.

ಸಿಬ್ಬಂದಿಗೆ ತರಬೇತಿ: ಈಗಾಗಲೇ ಇದಕ್ಕೆ ಸಂಬಂಧಿಸಿ ಸಿಬ್ಬಂದಿ ನಿಯೋಜಿಸಿದ್ದು, ಅವರಿಗೆ ತರಬೇತಿ ಕೂಡ ನೀಡಲಾಗಿದೆ. ಪಿಎಚ್‌ಡಿ ಪದವೀಧರರು ಹಾಗೂ ಇಬ್ಬರು ಟೆಕ್ನಿಷಿಯನ್‌ಗಳು ತರಬೇತಿ ಪಡೆದಿದ್ದಾರೆ. ಇನ್ನೂ ಸ್ಥಳೀಯ ವೈದ್ಯರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕೋವಿಡ್ ಇರುವ ಕಾರಣ ಈಗ ಈ ಪ್ರಯೋಗಾಲಯಕ್ಕೆ ಕೆಲಸ ಹೆಚ್ಚಾಗಿರಲಿದೆ. ಈಗ ಕಳುಹಿಸುತ್ತಿರುವ ವರದಿಗಳು ಪ್ರಯೋಗಾಲದಿಂದ ಬರಬೇಕಾದರೆ 2-3 ದಿನ ಹಿಡಿಯುತ್ತಿದೆ. ಇಲ್ಲಿಯೇ ಆರಂಭಿಸಿದಲ್ಲಿ ಅದೇ ದಿನ ಫಲಿತಾಂಶ ಕೈ ಸೇರಲಿದ್ದು, ಚಿಕಿತ್ಸೆಗೆ ಅನುಕೂಲವಾಗಲಿದೆ.

ಪ್ರಯೋಗಾಲಯ ಸಿದ್ಧತೆ ಕಾಮಗಾರಿ ಪರಿಶೀಲಿಸಲಾಗಿದೆ. ಆದಷ್ಟು ಬೇಗ ಕೆಲಸ ಮುಗಿಸಲು ತಿಳಿಸಲಾಗಿದೆ. ಸಿವಿಲ್‌ ಕಾಮಗಾರಿ ಮುಗಿದಿದ್ದು, 2-3 ದಿನದಲ್ಲಿ ಯಂತ್ರೋಪಕರಣ ಅಳವಡಿಕೆ ಕಾರ್ಯ ಮುಗಿಯಲಿದೆ. ಅದಕ್ಕಾಗಿ ಬೆಂಗಳೂರಿನಿಂದ ಇಂಜಿನಿಯರ್‌ ಬರಲಿದ್ದಾರೆ. ಎಸ್‌ಡಿಆರ್‌ಎಫ್‌ನಿಂದ ಎಸ್‌ ಡಿಆರ್‌ಎಫ್‌ನಿಂದ 50 ಲಕ್ಷ ಹಣ ನೀಡಲಾಗಿದೆ.
ಆರ್‌. ವೆಂಕಟೇಶಕುಮಾರ್‌,
ಜಿಲ್ಲಾಧಿಕಾರಿ

Advertisement

ರಿಮ್ಸ್‌ನಲ್ಲಿ ಸಾಕಷ್ಟು ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಇಂಥ ಪ್ರಯೋಗಾಲಯದ ಅಗತ್ಯ ಇತ್ತು. ಆಡಳಿತ ಭವನದಲ್ಲೇ ಪ್ರಯೋಗಾಲಯ ಆರಂಭಿಸಲಾಗುತ್ತಿದೆ. ಬಹುತೇಕ ಸಾಮಗ್ರಿ ಬಂದಿದ್ದು, ಶೀಘ್ರದಲ್ಲೇ ಅಳವಡಿಸಲಾಗುವುದು. ಬಹುಶಃ 8-10 ದಿನದೊಳಗೆ ಪ್ರಯೋಗಾಲಯ ಕಾರ್ಯಾರಂಭಗೊಳ್ಳಲಿದೆ.
ಡಾ. ಬಸವರಾಜ ಪೀರಾಪುರ,
ರಿಮ್ಸ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next