Advertisement

ಬರ ಕಾಮಗಾರಿಗೆ ನೀತಿ ಸಂಹಿತೆ ನೆಪ

11:05 AM May 10, 2019 | Team Udayavani |

ರಾಯಚೂರು: ಒಂದೆಡೆ ಭೀಕರ ಬರದಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ, ತುರ್ತು ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಆದರೆ, ಅಗತ್ಯ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಜನಪ್ರತಿನಿಧಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ರಾಯಚೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ ತಪ್ಪಿಲ್ಲ. ಟಾಸ್ಕ್ಫೋರ್ಸ್‌ ಸಮಿತಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ನಗರ ಮತ್ತು ಗ್ರಾಮೀಣ ಶಾಸಕರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಗರ ಶಾಸಕ ಡಾ| ಶಿವರಾಜ ಪಾಟೀಲ ನಗರಸಭೆ ಸದಸ್ಯರ ನಿಯೋಗದೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಾಕೀತು ಮಾಡಿದರೆ, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಜಿಲ್ಲಾಧಿಕಾರಿಗೆ ಪತ್ರ ಬರೆದು ತುರ್ತು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

ನೀತಿ ಸಂಹಿತೆ ಇರುವ ಕಾರಣ ಶಾಸಕರಿಗೆ ಟಾಸ್ಕ್ಫೋರ್ಸ್‌ ಸಭೆ ನಡೆಸುವ ಅಧಿಕಾರ ಇಲ್ಲದಾಗಿದೆ. ಆದರೆ, ಇದೇ ನೆಪದಲ್ಲಿ ಅಧಿಕಾರಿಗಳು ತಮಗೆ ಮನಬಂದಂತೆ ವರ್ತಿಸುತ್ತಿದ್ದು, ಎಲ್ಲಿಯೂ ಬರ ನಿವಾರಣೆಗೆ ಕಾಮಗಾರಿಗಳನ್ನು ಸರಿಯಾಗಿ ನಡೆಸುತ್ತಿಲ್ಲ. ಆದರೆ, ಇದ್ಯಾವುದರ ಪರಿವಿಲ್ಲದ ಜನ ಶಾಸಕರು ಬಂದಾಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಜಿಲ್ಲಾಡಳಿತ ಕುಡಿಯುವ ನೀರು, ಮೇವು ಪೂರೈಕೆಗೆ ಕ್ರಮ ಕೈಗೊಂಡಿದೆ ಎಂದು ಹೇಳುತ್ತಿದೆಯಾದರೂ ವಾಸ್ತವದಲ್ಲಿ ಚಿತ್ರಣವೇ ಬೇರೆಯಾಗಿದೆ. ಸಮೀಪದ ತುಂಗಭದ್ರ ಗ್ರಾಮದಲ್ಲಿ ಖಾಸಗಿ ಬೋರ್‌ ಮಾಲೀಕರಿಗೆ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಜನರಿಗೆ ನೀರು ನೀಡುವುದನ್ನು ನಿಲ್ಲಿಸಿದ್ದಾರೆ ಎಂಬ ದೂರುಗಳಿವೆ.

ಜಿಲ್ಲಾಡಳಿತ ಕಾಲಕ್ಕೆ ತಕ್ಕಂತೆ ಬರ ಕಾಮಗಾರಿಗಳನ್ನು ಕೈಗೊಳ್ಳಲು ಅಧಿಕಾರಿ, ಸಿಬ್ಬಂದಿಗೆ ಸೂಚಿಸಬೇಕು. ಸಭೆ ನಡೆಸಿ ವಾಸ್ತವ ವರದಿ ಪಡೆಯಬೇಕು. ಇದ್ಯಾವುದು ಸರಿಯಾಗಿ ನಡೆಯದ ಕಾರಣಕ್ಕೆ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಒಂದು ವೇಳೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ತಳಮಟ್ಟದ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂಬ ಟೀಕೆಗಳಿವೆ.

Advertisement

ನಗರದಲ್ಲೂ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿತ್ತು. ಹೊಸ ಪೈಪ್‌ಲೈನ್‌ ಕೆಲಸ ಮುಗಿದ ಬಳಿಕ ತುಸು ನಿರಾಳವಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಎಷ್ಟೇ ಬೋರ್‌ಗಳನ್ನು ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಇರುವ ಬೋರ್‌ಗಳು ಕೂಡ ಕೈ ಕೊಟ್ಟು ನೀರಿಲ್ಲದ ಸ್ಥಿತಿ ಇದೆ. ಕಿಮೀಗಟ್ಟಲೇ ಸಾಗಿ ಬೈಕ್‌, ಸೈಕಲ್ಗಳ ಮೇಲೆ ಕುಡಿಯುವ ನೀರು ತರುವ ಚಿತ್ರಣ ಸಹಜವಾಗಿದೆ.

ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿಯೇ ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸಿ ತುರ್ತು ಕ್ರಮಗಳ ನಿರ್ದೇಶನ ನೀಡಿರುವ ಮಾಹಿತಿ ಇದೆ. ಆದರೆ, ನೀತಿ ಸಂಹಿತೆ ನೆಪವೊಡ್ಡಿ ಬರ ಕಾಮಗಾರಿಗಳಿಗೆ ಒತ್ತು ನೀಡದಿರುವ ನಿರ್ಲಕ್ಷ್ಯ ಧೋರಣೆ ಇನ್ನಾದರೂ ಕಡಿಮೆ ಮಾಡುವರೇ ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next