ಸಿದ್ದಯ್ಯಸ್ವಾಮಿ ಕುಕನೂರು
ರಾಯಚೂರು: ಖುದ್ದು ಮುಖ್ಯಮಂತ್ರಿಯೇ ಬಂದು ಒಂದು ದಿನ ತಂಗಿದರೆ ಆ ಗ್ರಾಮದ ಅದೃಷ್ಟವೇ ಖುಲಾಯಿಸಿದಂತೆ. ಆದರೆ, ಸಿಂಧನೂರು ತಾಲೂಕಿನ ಚಿತ್ರಾಲಿ ಹಣೆಬರಹ ಮಾತ್ರ ಸಿಎಂ ವಾಸ್ತವ್ಯ ಮಾಡಿದರೂ ಬದಲಾಗಿಲ್ಲ.
2007ರಲ್ಲಿ ಸಿಂಧನೂರು ಕ್ಷೇತ್ರದ ಚಿತ್ರಾಲಿ ಗ್ರಾಮ ಆಯ್ಕೆ ಮಾಡಲಾಗಿತ್ತು. ಗ್ರಾಮದ ತಾಯಪ್ಪ ಎನ್ನುವವರ ಮನೆಯಲ್ಲಿ ತಂಗಿದ್ದ ಸಿಎಂ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ಆದರೆ, ಆ ಗ್ರಾಮದ ಸ್ಥಿತಿ ಇಂದಿಗೂ ಯಥಾರೀತಿ ಇದೆ ಎನ್ನುವುದು ಕಟು ವಾಸ್ತವ. ಸಿಎಂ ಬರುವ ಸುದ್ದಿ ತಿಳಿದ ಜಿಲ್ಲಾಡಳಿತ ತಾತ್ಕಾಲಿಕವಾಗಿ ಗ್ರಾಮವನ್ನು ಸಿಂಗರಿಸಿತ್ತು. ಇಡೀ ಜಿಲ್ಲಾಡಳಿತವೇ ಅಲ್ಲಿ ಹಾಜರಿತ್ತು. ಆ ವೇಳೆ ಸಿಎಂ ಗ್ರಾಮದ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅವರು ಹೇಳಿ ದಶಕ ಕಳೆದರೂ ಗ್ರಾಮಕ್ಕೆ ಹೇಳಿಕೊಳ್ಳುವಂಥ ಯಾವೊಂದು ಸೌಲಭ್ಯವೂ ದಕ್ಕಿಲ್ಲ. ಬದಲಾಗಿ ಆಗಿನದ್ದಕ್ಕಿಂತ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ.
ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಮುಖ್ಯ ರಸ್ತೆಯಿಂದ ಒಂದು ಕಿಮೀ ಕಚ್ಚಾ ರಸ್ತೆಯಲ್ಲಿ ಸಾಗಬೇಕು. ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೋಗಬೇಕಾದರೂ ನಿತ್ಯ ನಡೆದೇ ತೆರಳಬೇಕು. ಇನ್ನು ಗ್ರಾಮದಲ್ಲಿ 5ನೇ ತರಗತಿವರೆಗೆ ಶಾಲೆಯಿದ್ದು, ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಿಟಕಿಗಳೇ ಇವೆ. ಕಟ್ಟಡ ಯಾವಾಗ ಕುಸಿದು ಬೀಳುವುದೋ ಎನ್ನುವ ಸ್ಥಿತಿಯಲ್ಲಿದೆ. ಶಾಲಾ ಕಾಂಪೌಂಡ್ ಸಂಪೂರ್ಣ ಹಾಳಾಗಿದೆ. 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.
ಹೆಡಗಿನಾಳ ಗ್ರಾಪಂ ವ್ಯಾಪ್ತಿಗೆ ಬರುವ ಚಿತ್ರಾಲಿ ಗ್ರಾಮಕ್ಕೆ ಮೂಲ ಸೌಲಭ್ಯಗಳದ್ದೇ ಚಿಂತೆ. ಗ್ರಾಮದ ಯಲ್ಲಪ್ಪ ನಾಯಕ್ ಎನ್ನುವವರ ಜನತಾ ಮನೆಯಲ್ಲಿ ಸಿಎಂ ತಂಗಿದ್ದರು. ಆದರೆ, ಇಂದು ಆ ಮನೆ ಮುಂದೆಯೇ ಚರಂಡಿ ನೀರು ನಿಂತು ವಾತಾವರಣ ಹದಗೆಟ್ಟಿದೆ. ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕೂಡ ಇಲ್ಲ. ಗ್ರಾಮದಲ್ಲಿನ ಎರಡೂ ವಾರ್ಡ್‌ಗಳಲ್ಲಿ ಚರಂಡಿ ನೀರು ಬೇರೆಡೆ ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ಒಂದೆಡೆ ಶೇಖರಣೆಗೊಳ್ಳುತ್ತಿದೆ. ಮಳೆಗಾಲದಲ್ಲಂತೂ ಗ್ರಾಮದ ಪರಿಸರವೇ ಗಬ್ಬೆದ್ದು ಹೋಗಿರುತ್ತದೆ. ಕಚ್ಚಾ ರಸ್ತೆಯಲ್ಲಿ ಊರಿಗೆ ತಲುಪುವುದೇ ಕಷ್ಟ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮಸ್ಥರು ಹೇಳುವ ಪ್ರಕಾರ ಮುಖ್ಯಮಂತ್ರಿಗಳು ಬಂದು ಹೋದ ನಂತರ ಮೂರು ವರ್ಷ ಯಾವೊಬ್ಬ ಅಧಿಕಾರಿ ಇತ್ತ ಸುಳಿದಿಲ್ಲ. ಬಳಿಕ ಶಾಸಕರಾದ ಹಂಪನಗೌಡ ಬಾದರ್ಲಿ ಇಲ್ಲಿ ಸಿಸಿ ರಸ್ತೆ ಸೇರಿ ಕೆಲ ಕಾಮಗಾರಿ ಆರಂಭಿಸಿದ್ದರು. ಅವು ಕೂಡ ಅರೆಬರೆಯಾಗಿವೆ. ಇನ್ನು ಸಿಎಂ ತಮ್ಮ ಮನೆಯಲ್ಲಿ ತಂಗಿದ್ದರೂ ಯಲ್ಲಪ್ಪ ನಾಯಕ ಅವರ ಜೀವನವೂ ಬದಲಾಗಿಲ್ಲ. ಅವರು ತಂಗಿ ಹೋಗಿದ್ದ ಜನತಾ ಮನೆ ಕೂಡ ಈಗ ಬಿರುಕು ಬಿಟ್ಟಿದೆ. ನಿರ್ಮಿಸಿದ್ದ ಶೌಚಗೃಹ ಕೂಡ ಹಾಳಾಗಿದೆ.