ರಾಯಚೂರು: ಜನರ ಸಮಸ್ಯೆ ಹತ್ತಿರದಿಂದ ಆಲಿಸಲು ಗ್ರಾಮ ವಾಸ್ತವ್ಯ ಆರಂಭಿಸಿರುವ ಕುಮಾರಸ್ವಾಮಿಗೆ ಬುಧವಾರ ಪ್ರತಿಭಟನೆಗಳ ಸ್ವಾಗತ ಸಿಕ್ಕಿದೆ. ಹೋರಾಟದ ಬಿಸಿ ತಾಳದೆ ತಾಳ್ಮೆ ಕಳೆದುಕೊಂಡ ಸಿಎಂ ಸಿಡಿಮಿಡಿಗೊಂಡು ‘ಮೋದಿ’ ಹೆಸರಲ್ಲಿ ಗದರಿದ ಪ್ರಸಂಗವೂ ನಡೆಯಿತು.
ಮೊದಲ ಗ್ರಾಮ ವಾಸ್ತವ್ಯದಿಂದ ಪ್ರಶಂಸೆ ಜತೆಗೆ ಟೀಕೆ ಎದುರಿಸಿದ್ದ ಕುಮಾರಸ್ವಾಮಿ, ಎರಡನೇ ವಾಸ್ತವ್ಯದಲ್ಲಿ ಆ ತಪ್ಪುಗಳಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೂ ಜಿಲ್ಲಾಡಳಿತ ಪ್ರತಿಭಟನಾಕಾರರನ್ನು ತಡೆಯುವಲ್ಲಿ ವಿಫಲವಾಗಿದ್ದು ಸಿಎಂ ತಲೆ ಬಿಸಿ ಮಾಡಿತು. ಸಮಸ್ಯೆ ಹೇಳಿಕೊಂಡು ಬಂದವರ ಬಿಗಿಪಟ್ಟಿಗೆ ಸಿಟ್ಟಾದ ಸಿಎಂ ಕುಮಾರಸ್ವಾಮಿ, ವೋಟ್ ಮೋದಿಗೆ ಹಾಕಿ ಕೆಲಸ ಮಾಡಿಕೊಡಿ ಎಂದು ನನ್ನ ಬಳಿ ಬಂದಿದ್ದೀರಾ ಎಂದು ಹರಿಹಾಯ್ದರು.
ತಮ್ಮ ಹೇಳಿಕೆ ವಿವಾದ ಸ್ವರೂಪ ಪಡೆಯುತ್ತಿದ್ದಂತೆ, ನಾನು ಮೋದಿ ಬಗ್ಗೆ ಮಾತನಾಡಿದ್ದೇ ತಪ್ಪಾ? ವೋಟ್ ಅವರಿಗೆ ಹಾಕಿ ಸೌಲಭ್ಯ ನನ್ನನ್ನು ಕೇಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ನಾನು ಪ್ರಧಾನಿ ಮೋದಿ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಏನೇನಾಯ್ತು?: ಬುಧವಾರ ಬೆಳಗ್ಗೆ ರೈಲಿನ ಮೂಲಕ ನಗರಕ್ಕೆ ಆಗಮಿಸಿದ ಅವರು ನೇರವಾಗಿ ಯರಮರಸ್ ವಿಐಪಿ ಗೆಸ್ಟ್ ಹೌಸ್‌ಗೆ ತೆರಳಿದರು. ಕೆಲ ಕಾಲ ವಿಶ್ರಾಂತಿ ಪಡೆದು ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಮಾಲೋಚನೆ ಮಾಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಕರೇಗುಡ್ಡಕ್ಕೆ ಪ್ರಯಾಣ ಬೆಳೆಸಲು ಸಿದ್ಧರಾದರು. ಆಗ ಅತಿಥಿಗೃಹದ ಬಳಿ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿದರು. ಇನ್ನೇನು ಹೊರಡಬೇಕು ಎಂದು ಬಸ್ ಹತ್ತಿ ಮುಂದಕ್ಕೆ ಸಾಗುತ್ತಿದ್ದಂತೆ ತುಂಗಭದ್ರಾ ಹಂಗಾಮಿ ಕಾರ್ಮಿಕರು, ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಸಿಎಂ ಬಸ್‌ಗೆ ಅಡ್ಡಲಾಗಿ ಹೋರಾಟ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರೆ ಖುದ್ದು ಡಿಸಿ, ಸಿಇಒ ಕೂಡ ರಸ್ತೆಗಿಳಿದರು. ಇದನ್ನು ಗಮನಿಸಿದ ಸಿಎಂ ಸಿಡಿಮಿಡಿಗೊಂಡು ಪ್ರತಿಭಟನಾಕಾರರ ಮೇಲೆ ಹರಿಹಾಯ್ದುರು. ಅಲ್ಲದೇ ತಾವೇ ಬಸ್‌ನಿಂದ ಇಳಿಯಲು ಮುಂದಾದರು. ಆಗ ಸಚಿವ ನಾಡಗೌಡ ಸಿಎಂ ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿದರು.
ಇನ್ನು ಅತ್ತ ದೇವದುರ್ಗ ಶಾಸಕ ಶಿವನಗೌಡ ನಾಯಕ ಸಿಎಂ ನಾಟಕೀಯ ಗ್ರಾಮ ವಾಸ್ತವ್ಯ ಖಂಡಿಸಿ ದೊಡ್ಡ ಪ್ರಮಾಣದ ಪಾದಯಾತ್ರೆ ಹಮ್ಮಿಕೊಂಡಿದ್ದರು. ಅವರನ್ನು ತಡೆಯುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹೈರಾಣಾಯಿತು. ಬಳಿಕ ಶಾಸಕ, ಬೆಂಬಗಲಿಗರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.