ರಾಯಚೂರು: ಲಾಕ್‌ಡೌನ್ ಕಾರಣಕ್ಕೆ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಉತ್ಪನ್ನಗಳ ಬೆಲೆ ಸಂಪೂರ್ಣ ಕುಸಿದಿದೆ. ಇಂಥ ವೇಳೆ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ರೀತಿಯಿಂದ ಕ್ರಮ ಕೈಗೊಳ್ಳುವುದಾಗಿ ಎಡಿಸಿ ದುರುಗೇಶ ಭರವಸೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಖರೀದಿದಾರರು, ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಸಗಟು ವ್ಯಾಪಾರಸ್ಥರು ಖರೀದಿಸಿ ಮಾರಬೇಕು. ಹೆಚ್ಚು ಉತ್ಪನ್ನ ಉಳಿದರೆ ಬೇರೆ ಜಿಲ್ಲೆಗೆ ಸಾಗಿವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸ್ವಯಂ ಸೇವಾ ಸಂಸ್ಥೆ ಮುಖಂಡ ಶರಣಬಸಪ್ಪ ಪಾಟೀಲ ಮಾತನಾಡಿ, ಹಣ್ಣು ಮತ್ತು ತರಕಾರಿ ಮಾರಾಟದಲ್ಲಿ ಮೊದಲು ಜಿಲ್ಲೆಗೆ ಆದ್ಯತೆ ನೀಡಬೇಕು. ತದನಂತರ ಬೇರೆ ರಾಜ್ಯಕ್ಕೆ ಕಳುಹಿಸಬಹುದು. ನಗರದಲ್ಲಿರುವ ಹಲವು ಬಡಾವಣೆಗಳಿಗೆ ಹೋಗಿ ಮಾರಿದರೆ ಅನುಕೂಲವಾಗಲಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹ್ಮದ್ ಅಲಿ ಮಾತನಾಡಿ, ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಬೆಳೆದ ಪಪ್ಪಾಯಿಗಳನ್ನು ಮಹಾರಾಷ್ಟ್ರದ ವ್ಯಾಪಾರಸ್ಥರು ಖರೀದಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಸಗಟು ವ್ಯಾಪಾರಸ್ಥರು ಪಪ್ಪಾಯಿ ಸೇರಿದಂತೆ ಇತರೆ ಹಣ್ಣುಗಳನ್ನು ಯೋಗ್ಯ ದರದಲ್ಲಿ ಖರೀದಿಸಿ ಮಾರುವುದು ಸೂಕ್ತ ಎಂದು ಸಲಹೆ ನೀಡಿದರು.
ತರಕಾರಿ ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹ್ಮದ್ ಇಕ್ಬಾಲ್ ಮಾತನಾಡಿ, ನಗರದ ಮಾರುಕಟ್ಟೆಯಲ್ಲಿ ಬೆಳಗ್ಗೆ 6:00ರಿಂದ 7:30ರ ವರೆಗೆ ಮಾತ್ರ ವಹಿವಾಟಿಗೆ ಅವಕಾಶವಿದೆ. ಈ ಅವ ಧಿಯನ್ನು ವಿಸ್ತರಿಸಿದರೆ ಅನುಕೂಲವಾಗುತ್ತದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಜಿಲ್ಲೆಯ ರೈತರಿಗೆ ಅನುಕೂಲವಾಗಲಿ ಎಂದು ವಾಟ್ಸ್ ಆ್ಯಪ್ ಗ್ರೂಪ್ ರಚಿಸಿದ್ದು, ಎಲ್ಲ ಪ್ರಗತಿಪರ ರೈತರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಖರೀದಿದಾರರನ್ನು ಸೇರಿಸಲಾಗಿದೆ. ರೈತರು ಈ ಮೂಲಕ ನೇರವಾಗಿ ಖರೀದಿದಾರರನ್ನೇ ಸಂಪರ್ಕಿಸ ಬಹುದಾಗಿದೆ ಎಂದು ಹೇಳಿದರು.
ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶರಣಬಸವ ಮಾತನಾಡಿ, ತರಕಾರಿಗಳನ್ನು ಮನೆ ಮನೆಗೆ ತಳ್ಳುವ ಗಾಡಿಗಳಲ್ಲಿ ಮಾರುವುದು ಸೂಕ್ತ ಎಂದು ಹೇಳಿದರು.