ರಾಯಚೂರು: ನಗರದ ಉಸ್ಮಾನಿಯಾ ಮಾರುಕಟ್ಟೆ ಹಿಂಭಾಗದ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವ ಕೋಟೆ ಪಕ್ಕದಲ್ಲಿ ಖಾಸಗಿಯವರು ಕೊಳವೆಬಾವಿ ಕೊರೆಸಿದ್ದು, ಕಂಡರೂ ಕಾಣದಂತಿರುವ ನಗರಾಡಳಿತ, ಪ್ರಾಚ್ಯವಸ್ತು ಇಲಾಖೆ ನಡೆಗೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಗರದಲ್ಲಿ ಈಗಾಗಲೇ ಕೋಟೆಗಳ ಒತ್ತುವರಿ ಮಿತಿಮೀರಿದೆ ಎಂಬ ಆರೋಪಗಳಿವೆ. ಅಲ್ಲದೇ, ಈಗಿರುವ ಒಂದಷ್ಟು ಪ್ರಾಚ್ಯವಸ್ತುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಕಿಂಚಿತ್ತೂ ಕಾಳಜಿಯೂ ಕಾಣದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂಥದ್ದರಲ್ಲಿ ಶನಿವಾರ ತಡರಾತ್ರಿ ಕೋಟೆ ಪಕ್ಕದಲ್ಲೇ ಬೋರ್ ಕೊರೆಯಿಸಲಾಗಿದೆ. ಅದಕ್ಕೆ ಅಡ್ಡ ಬಂದ ಕಲ್ಲುಗಳನ್ನು ತೆರವು ಮಾಡಿ ಬೋರ್ ಕೊರೆಸಲಾಗಿದೆ. ಈ ರೀತಿ ಮಾಡುವುದು ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಗಳ ನಿಯಮಗಳಿಗೆ ವಿರುದ್ಧವಾಗಿದ್ದು, ನಗರದಲ್ಲಿ ಮಾತ್ರ ಯಾರೂ ಹೇಳುವವರು ಕೇಳುವವರಿಲ್ಲದಾಗಿದೆ.
ಈಗಾಗಲೇ ನಗರದ ಉಸ್ಮಾನೀಯ ಮಾರುಕಟ್ಟೆ ಹಿಂಭಾಗ ಸೇರಿ ವಿವಿಧೆಡೆ ಕೋಟೆಗಳ ಒತ್ತುವರಿ ಮಾಡಲಾಗಿದೆ ಎಂಬ ಆರೋಪಗಳಿವೆ. ಆದರೆ, ಜಿಲ್ಲಾಡಳಿತವಾಗಲಿ, ಪ್ರಾಚ್ಯವಸ್ತು ಇಲಾಖೆ ಆಗಲಿ ಆ ಸ್ಥಳಗಳ ತೆರವಿಗೆ ಮುಂದಾಗುತ್ತಿಲ್ಲ. ಆದರೆ, ಈಗ ಕೋಟೆ ಒತ್ತುವರಿ ಮಾಡಿದ್ದಲ್ಲದೇ, ಕೇವಲ ಮೂರು ಅಡಿ ಪಕ್ಕದಲ್ಲಿ ನೂರಾರು ಅಡಿ ಕೊಳವೆ ಬಾವಿ ಕೊರೆಸುತ್ತಿರುವುದು ಐತಿಹಾಸಿಕ ಸ್ಥಳಗಳ ರಕ್ಷಣೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.
ನಿಯಮ ಉಲ್ಲಂಘನೆ: ಪ್ರಾಚ್ಯವಸ್ತು, ಪುರಾತತ್ವ ಇಲಾಖೆ ನಿಯಮಗಳ ಪ್ರಕಾರ ಯಾವುದೇ ಐತಿಹಾಸಿಕ ಸ್ಥಳದ 100 ಮೀ. ವ್ಯಾಪ್ತಿಯಲ್ಲಿ ಸ್ಮಾರಕಕ್ಕೆ ಧಕ್ಕೆ ಬರುವ ಚಿಕ್ಕ ಕೆಲಸಗಳನ್ನೂ ಮಾಡಬಾರದು. ಅಂಥ ಅನಿವಾರ್ಯ ಸನ್ನಿವೇಶ ಎದುರಾದರೆ ಜಿಲ್ಲಾಡಳಿತದ ಪರವಾನಗಿ ಬೇಕು. ಇನ್ನು200-300 ಮೀಟರ್ ವ್ಯಾಪ್ತಿಯಲ್ಲಿ ಕೆಲವೊಂದು ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಅದಕ್ಕೂ ಪುರಾತತ್ವ ಇಲಾಖೆ ಪರವಾನಗಿ ಕಡ್ಡಾಯವಾಗಿ ಬೇಕು.
ನಗರಾಡಳಿತ ಮೌನ: ನಗರದಲ್ಲಿ ಐತಿಹಾಸಿಕ ಸ್ಥಳಗಳ ಒತ್ತುವರಿ ಬಗ್ಗೆ ಅನೇಕ ಸಂಘಟನೆಗಳು ಹೋರಾಟ ನಡೆಸಿ ಎಚ್ಚರಿಸಿದರೂ ನಗರಸಭೆ ಮಾತ್ರ ಮೌನಕ್ಕೆ ಶರಣಾಗಿದೆ. ಎಲ್ಲ ವಿಚಾರಗಳು ಕಂಡರೂ ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದೆ. ಇನ್ನಾದರೂ ಎಚ್ಚರಿಕೆ ವಹಿಸಿ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಸೆ.