ರಾಯಚೂರು: ವ್ಯಂಗ್ಯಚಿತ್ರಗಳು ಅಕ್ಷರಗಳಿಗಿಂತ ಪ್ರಭಾವಶಾಲಿ. ಸಾವಿರಾರು ಪದಗಳು ಹೇಳುವ ವಿಚಾರವನ್ನು ಒಂದು ವ್ಯಂಗ್ಯಚಿತ್ರ ಪರಿಣಾಮಕಾರಿಯಾಗಿ ಹೇಳಬಲ್ಲದು ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ವ್ಯಂಗ್ಯಚಿತ್ರಕಾರ ಈರಣ್ಣ ಬೆಂಗಾಲಿ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ಬೆಂಗಾಲಿ ರೇಖೆಗಳು ವ್ಯಂಗ್ಯಚಿತ್ರ ಸಂಕಲನ ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಸ್ಯೆಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ವ್ಯಂಗ್ಯಚಿತ್ರ ಹೆಚ್ಚು ಪರಿಣಾಮಕಾರಿಯಾಗಬಲ್ಲವು. ಅಂಥ ಕಲೆಯನ್ನು ಕರಗತ ಮಾಡಿಕೊಂಡ ಈರಣ್ಣ ಬೆಂಗಾಲಿ ಸಾಧನೆ ಶ್ಲಾಘನೀಯ ಎಂದು ಬಣ್ಣಿಸಿದರು.
ಬರಹಗಾರರಿಗೆ, ವ್ಯಂಗ್ಯ ಚಿತ್ರಕಲಾವಿದರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು. ಅವರ ಈ ಸೇವೆಯನ್ನು ಇನ್ನೂ ಹೆಚ್ಚಾಗಿ ಬಳಸಿಕೊಳ್ಳಬೇಕು. ಈ ವಿಚಾರದಲ್ಲಿ ಏನೇ ನೆರವು ಬೇಕಾದರೂ ನೀಡಲು ನಾನು ಸಿದ್ಧ ಎಂದರು. ಕಲಾವಿದ ಎಚ್.ಎಚ್.ಮ್ಯಾದಾರ ಅವರು ಬೆಂಗಾಲಿ ರೇಖೆಗಳು ಕೃತಿ ಲೋಕಾರ್ಪಣೆ ಮಾಡಿದರು. ಮೂರು ದಿನ ನಡೆಯಲಿರುವ ವ್ಯಂಗ್ಯಚಿತ್ರಗಳ ಪ್ರದರ್ಶನಕ್ಕೆ ಲಲಿತಾ ಕಲಾ ಅಕಾಡೆಮಿ ಸದಸ್ಯ ಅನೀಸ್ ಫಾತಿಮಾ ಚಾಲನೆ ನೀಡಿದರು.
ಹೋರಾಟಗಾರರಾದ ಪ್ರಸನ್ನ ಮಂಡಲಗಿರಿ, ಅಂಬಣ್ಣ ಅರೋಲಿ, ಸಾಹಿತಿ ವೀರಹನುಮಾನ, ಡಾ| ರಾಜಾಶ್ರೀ ಕಲ್ಲೂರಕರ್, ದೇವೇಂದ್ರ ಹುಡಾ, ಎಂ.ಯಲ್ಲಪ್ಪ ಮರ್ಚೆಡ್, ಕೊಂಡಾ ವೆಂಕಟೇಶ, ಚಂದ್ರಕಾಂತ, ಗಂಗಾಧರ ಪಳಾರಿಮಠ, ಜಿ.ಸುರೇಶ, ಸೈಯ್ಯದ್ ಹಫಿಜುಲ್ಲಾ ಸೇರಿದಂತೆ ಅನೇಕರಿದ್ದರು