ರಾಯಚೂರು: ಎಂಟು ತಿಂಗಳಿಂದ ಬಾಕಿ ಇರುವ ಎಸಿಟಿಎಸ್ ಸೇವೆಗಳ ಪ್ರೋತ್ಸಾಹ ಧನ ಸೇರಿ ಬಾಕಿ ಪ್ರೋತ್ಸಾಹಧನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತಾ ಆಶಾ ಕಾರ್ಯಕರ್ತೆಯರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಳಿಕ ಜಿಲ್ಲಾಮಟ್ಟದ ಅಧಿಕಾರಿ ಮೂಲಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. 3-4 ತಿಂಗಳ ಫಿಕ್ಸ್ ಪೇಮೆಂಟ್ ಜಾರಿಗೊಳಿಸದೆ ಸತಾಯಿಸಲಾಗುತ್ತಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಾಕಷ್ಟು ಮಹತ್ತರ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾಗಿದೆ. ಆದರೆ, ಸೌಲಭ್ಯದ ವಿಚಾರದಲ್ಲಿ ಅವರನ್ನು ಸದಾ ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸುತ್ತಲೇ ಬರಲಾಗಿದೆ ಎಂದು ತಿಳಿಸಿದರು.
ಕಳೆದ 2-3 ತಿಂಗಳಿಂದ ಹೊಸ ರೀತಿಯ ವೇತನ ವಿಧಾನ ಪದೇಪದೆ ಬದಲಿಸುತ್ತಿರುವುದು, ಆಶಾ ಕಾರ್ಯಕರ್ತೆಯರ ಮೇಲೆ ಗದಾ ಪ್ರಹಾರ ಮಾಡಿದಂತಾಗುತ್ತಿದೆ. ಹೊಸ ಯೋಜನೆಗಳನ್ನು ಜಾರಿ ಮಾಡುವಾಗ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆಶಾ ಕಾರ್ಯಕರ್ತೆಯರು ಅನಗತ್ಯ ಗೊಂದಲಕ್ಕೆ ಸಿಲುಕುವಂತಾಗುತ್ತದೆ ಎಂದು ದೂರಿದರು.
ಮಾಸಿಕ 3 ಸಾವಿರ ರೂ.ದಂತೆ ಎಂಟು ತಿಂಗಳ ಎಸಿಟಿಎಸ್ ಪ್ರೋತ್ಸಾಹಧನವನ್ನು ಕೂಡಲೇ ಪಾವತಿಸಬೇಕು. ಆಶಾ ಕಾರ್ಯಕರ್ತೆಯರು ಎಷ್ಟು ಕೆಲಸ ಮಾಡುವರೊ ಅಷ್ಟು ವೇತನ ಜಾರಿಗೊಳಿಸಬೇಕು. ಲಾರ್ವಾ ಸೇರಿ ವಿವಿಧ ಸರ್ವೆಗಳ ಕಾರ್ಯಕ್ಕೆ ಪ್ರತಿ ದಿನಕ್ಕೆ 300 ರೂ. ನಿಗದಿ ಮಾಡಬೇಕು. ಈ ಹಿಂದೆ ಭರವಸೆ ನೀಡಿದಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಕಷ್ಟಕಾಲದಲ್ಲಿ ನೆರವಾಗಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ವೀರೇಶ ಎನ್.ಎಸ್., ಜಿಲ್ಲಾ ಕಾರ್ಯದರ್ಶಿ ಈರಮ್ಮ, ತಾಲೂಕು ಗೌರವಾಧ್ಯಕ್ಷ ಮಹೇಶ, ಲಕ್ಷ್ಮೀ, ಮಂಜುಳಾ, ಪ್ರಭಾವತಿ, ಮಲ್ಲಮ್ಮ ಸೇರಿ ಅನೇಕ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.