Advertisement

ತುಂಗಾಭದ್ರೆಯಲ್ಲಿ ಭಕ್ತರ ಪುಣ್ಯ ಸ್ನಾನ

05:00 PM Aug 17, 2019 | Naveen |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದ ವೇಳೆ ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದು ಭಕ್ತರ ಮನೋಲ್ಲಾಸ ಇಮ್ಮಡಿಗೊಳಿಸಿದೆ.

Advertisement

ಆರಾಧನೆ ಗಾಗಿ ದೂರದೂರುಗಳಿಂದ ಬರುವ ಭಕ್ತರು ತುಂಬಿದ ತುಂಗಭದ್ರೆಯಲ್ಲಿ ಮಿಂದೆದ್ದು ರಾಯರ ದರ್ಶನಾಶೀರ್ವಾದ ಪಡೆಯುವ ಮೂಲಕ ಪುನೀತರಾಗುತ್ತಿದ್ದಾರೆ. ರಾಯರ ಪೂರ್ವಾರಾಧನೆ ಅಂಗವಾಗಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಕಳೆದ ಕೆಲ ದಿನಗಳ ಹಿಂದೆ ತುಂಗಭದ್ರಾ ಜಲಾಶಯದಿಂದ ನದಿಗೆ 2.30 ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದರಿಂದ ಪ್ರವಾಹ ಭೀತಿ ಎದುರಾಗಿತ್ತು. ಆದರೆ, ಈಗ ಕೇವಲ 79 ಸಾವಿರ ಕ್ಯೂಸೆಕ್‌ ನೀರು ಬರುತ್ತಿರುವ ಕಾರಣ ನದಿ ಶಾಂತವಾಗಿ ಹರಿಯುತ್ತಿದೆ. ಇದರಿಂದ ಭಕ್ತರು ನದಿಯಲ್ಲಿ ಇಳಿದು ಪುಣ್ಯಸ್ನಾನ ಮಾಡುತ್ತಿರುವುದು ಕಂಡು ಬರುತ್ತಿದೆ.

ನದಿಯಲ್ಲಿ ಯಾವುದೇ ಅಪಾಯಕ್ಕೆ ಆಸ್ಪದ ನೀಡದಂತೆ ಮಠದ ಆಡಳಿತ ಮಂಡಳಿ ಮೀನುಗಾರರನ್ನು ನಿಯೋಜಿಸಿದೆ. ಮೀನುಗಾರರು ಕೂಡ ನದಿ ಪಾತ್ರದಲ್ಲಿ ತೆಪ್ಪಗಳನ್ನು ಹಾಕಿದ್ದು, ಸದಾ ಕಾವಲು ಕಾಯುತ್ತಿದ್ದಾರೆ. ಅಲ್ಲದೇ, ಮಠದ ಆಡಳಿತ ಮಂಡಳಿ ಕೂಡ ನದಿ ಆಳಕ್ಕೆ ಇಳಿಯದೇ ದಡದಲ್ಲಿಯೇ ಕುಳಿತು ಸ್ನಾನ ಮಾಡುವಂತೆ ಎಚ್ಚರಿಕೆ ನೀಡುತ್ತಿದೆ. ಇನ್ನೂ ವೃದ್ಧ, ಅಂಗವಿಕಲಾರಿಗಾಗಿಯೇ ಸ್ನಾನಘಟ್ಟದಲ್ಲಿ ನಳಗಳ ವ್ಯವಸ್ಥೆ ಮಾಡಿದ್ದು, ಅಲ್ಲಿಯೇ ಸ್ನಾನ ಮಾಡಬಹುದಾಗಿದೆ. ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಸ್ನಾನಗೃಹಗಳು, ಮೊಬೈಲ್ ಶೌಚಗೃಹಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next