Advertisement

ರಿಮ್ಸ್‌ನಲ್ಲಿ 300 ಬೆಡ್‌ಗಳ ಮತ್ತೊಂದು ಆಸ್ಪತ್ರೆ

10:54 AM Sep 08, 2019 | Team Udayavani |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು
: ಈಗಾಗಲೇ 500 ಬೆಡ್‌ಗಳ ಆಸ್ಪತ್ರೆ ಮೂಲಕ ಜನರಿಗೆ ಸೇವೆ ನೀಡುತ್ತಿರುವ ‘ರಿಮ್ಸ್‌’ನಲ್ಲಿ ಶೀಘ್ರದಲ್ಲೇ 300 ಬೆಡ್‌ಗಳ ಮತ್ತೂಂದು ಆಸ್ಪತ್ರೆ ಕಟ್ಟಡ ಕಾಮಗಾರಿ ಶುರುವಾಗಲಿದೆ. ಇದಕ್ಕಾಗಿ ಸರ್ಕಾರದಿಂದ ಈಗಾಗಲೇ 32 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ.

Advertisement

ನಿತ್ಯ 800ರಿಂದ 1000 ಹೊರರೋಗಿಗಳು, ನೂರಾರು ಒಳ ರೋಗಿಗಳು ಬರುವ ‘ರಿಮ್ಸ್‌’ನಲ್ಲಿ ಕೆಲವೊಮ್ಮೆ ಬೆಡ್‌ಗಳ ಕೊರತೆ ಎದುರಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಆಧರಿಸಿ ಹಿಂದಿನ ಸರ್ಕಾರಕ್ಕೆ ರಿಮ್ಸ್‌ ಆಡಳಿತ ಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು. ಅದರನ್ವಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು, ಜಿಲ್ಲೆಯ ಜನರಿಗೆ ಇನ್ನಷ್ಟು ಉತ್ತಮ ಸೇವೆ ನಿರೀಕ್ಷೆ ಮೂಡಿದೆ.

ವ್ಯಾಸಂಗಕ್ಕೆ ಪೂರಕ: ಈಗಾಗಲೇ 500 ಬೆಡ್‌ಗಳ ಬೃಹತ್‌ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಹಿಂದೆ ರಿಮ್ಸ್‌ನಲ್ಲಿ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅವಕಾಶವಿತ್ತು. ಆದರೆ, ಕಳೆದ ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಪ್ರಯೋಗಕ್ಕೆ ಈಗಿರುವ ಬೆಡ್‌ಗಳು ಕಡಿಮೆಯಾಗುತ್ತಿವೆ. ಇದರಿಂದ ನೂತನವಾಗಿ 300 ಬೆಡ್‌ಗಳ ಆಸ್ಪತ್ರೆ ಶುರುವಾದಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ಅನುಕೂಲವಾಗಲಿದೆ ಎಂಬುದು ರಿಮ್ಸ್‌ ನಿರ್ದೇಶಕರ ವಿಶ್ಲೇಷಣೆ.

30 ಸಾವಿರ ಚದರಡಿ ಸ್ಥಳ: ಈ ಹಿಂದೆ ರಿಮ್ಸ್‌ಗಾಗಿ ಮೀಸಲಿಟ್ಟ ಸ್ಥಳದಲ್ಲಿ ಎ ಮತ್ತು ಬಿ ಬ್ಲಾಕ್‌ ಎಂದು ವಿಂಗಡಿಸಲಾಗಿತ್ತು. ಎ ಬ್ಲಾಕ್‌ನಲ್ಲಿ ಈಗಾಗಲೇ 500 ಬೆಡ್‌ಗಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಬಿ ಬ್ಲಾಕ್‌ನಲ್ಲಿ 300 ಬೆಡ್‌ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಒಟ್ಟು 30 ಸಾವಿರ ಚದರಡಿ ಸ್ಥಳ ಮೀಸಲಿಟ್ಟಿದ್ದು, ಅದರಲ್ಲೇ ಕಟ್ಟಡ ತಲೆ ಎತ್ತಲಿದೆ. ಎ ಬ್ಲಾಕ್‌ನಲ್ಲಿ 500 ಬೆಡ್‌ಗಳ ಆಸ್ಪತ್ರೆಯಾದ ಕಾರಣ ಆರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು. ಈಗ ಕೇವಲ ಮೂರು ಅಂತಸ್ತಿನ ಕಟ್ಟಡ ಮಾತ್ರ ನಿರ್ಮಾಣಗೊಳ್ಳಲಿದೆ.

ಪಕ್ಕದ ಜಿಲ್ಲೆಗೂ ಅನುಕೂಲ: ಈ ಆಸ್ಪತ್ರೆ ಕೇವಲ ರಾಯಚೂರು ಜಿಲ್ಲೆಗೆ ಮಾತ್ರವಲ್ಲ, ಅಕ್ಕ ಪಕ್ಕದ ಜಿಲ್ಲೆಗಳ ಜನತೆಗೂ ಸೇವೆ ನೀಡುತ್ತಿದೆ. ಯಾದಗಿರಿ ಜಿಲ್ಲೆಯ ಬಹುತೇಕ ರೋಗಿಗಳು ರಿಮ್ಸ್‌ಗೆ ಬರುತ್ತಾರೆ. ಅಷ್ಟೇಯಲ್ಲ, ಪಕ್ಕದ ತೆಲಂಗಾಣ, ಆಂಧ್ರಪ್ರದೇಶದಿಂದಲೂ ಜನ ಚಿಕಿತ್ಸೆಗೆಂದು ಬರುತ್ತಾರೆ. ಆಡಳಿತಾತ್ಮಕವಾಗಿ ಬೇರೆ ರಾಜ್ಯಗಳಿಗಳಿಗೆ ಸೇರಿದರೂ ಭೌಗೋಳಿಕವಾಗಿ ರಾಯಚೂರು ಜಿಲ್ಲೆಯನ್ನು ಅವಲಂಬಿಸಿದ ನೂರಾರು ಹಳ್ಳಿಗಳಿಗೆ ಈ ಆಸ್ಪತ್ರೆಯೇ ಆಧಾರ. ಹೀಗಾಗಿ ಹೆಚ್ಚುವರಿ ಬೆಡ್‌ಗಳ ಆಸ್ಪತ್ರೆಯಿಂದ ಇನ್ನಷ್ಟು ಹೆಚ್ಚಿನ ಸೇವೆ ನಿರೀಕ್ಷಿಸಬಹುದು.

Advertisement

ರಿಮ್ಸ್‌ನಲ್ಲಿ ಈಗಾಗಲೇ 500 ಬೆಡ್‌ಗಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದಿಂದ 300 ಬೆಡ್‌ಗಳ ಮತ್ತೂಂದು ಆಸ್ಪತ್ರೆ ಮಂಜೂರಾಗಿದೆ. 32 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುವುದು. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಶುರುವಾಗುವ ವಿಶ್ವಾಸವಿದೆ.
•ಡಾ|ಬಸವರಾಜ್‌ ಪೀರಾಪುರೆ,
‘ರಿಮ್ಸ್‌’ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next