ರಾಯಚೂರು: ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗ ನಿವಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಿರಿಯ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಹೆಚ್ಚು ಸಕ್ರೀಯವಾಗಿ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಕೆ.ಎಸ್.ನಸೀರ್ ಹೇಳಿದರು.
ಜು.27ರವರೆಗೆ ನಡೆಯುವ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮಕ್ಕೆ ನಗರದ ಹರಿಜನವಾಡದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಭವನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ರಾಯಚೂರು ತಾಲೂಕಿನಲ್ಲಿ 5,77,931 ಜನಸಂಖ್ಯೆಯಿದ್ದು, ಗ್ರಾಮೀಣ ಪ್ರದೇಶದ 32 ಹಳ್ಳಿಗಳ 52,629 ಮತ್ತು ನಗರದಲ್ಲಿ 26 ಬಡಾವಣೆಗಳ 57,101 ಜನರನ್ನು ಕ್ಷಯರೋಗ ತಪಾಸಣೆಗೆ ಒಳಪಡಿಸಲಾಗುವುದು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಸುರೇಂದ್ರಬಾಬು ಮಾತನಾಡಿ, ಕಿರಿಯ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಜು.27ರವರೆಗೆ ಮನೆ ಮನೆಗೆ ಭೇಟಿ ನೀಡಿ ಸಂಶಯಾಸ್ಪದ ರೋಗಿಗಳಲ್ಲಿ ಕೆಮ್ಮು ಇದ್ದರೆ ಅವರ ಕಫವನ್ನು ಪಡೆಯುತ್ತಾರೆ. ಕ್ಷಯ ರೋಗದಲ್ಲಿ ಎರಡು ರೀತಿ ಕ್ಷಯರೋಗ ಇರುತ್ತವೆ. ಶ್ವಾಸಕೋಶದ ಕ್ಷಯರೋಗ, ಶ್ವಾಸಕೋಶೇತ್ತರ ಕ್ಷಯರೋಗ. ಇಲಾಖೆ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ| ಎಂ.ಡಿ.ಶಾಕೀರ ಮೊಯಿದ್ದೀನ್ ಮಾತನಾಡಿ, ಸಕ್ರೀಯ ಕ್ಷಯರೋಗ ಪತ್ತೆ ಚಿಕಿತ್ಸಾ ಆಂದೋಲನ ಕಾರ್ಯಕ್ರಮದಲ್ಲಿ ಕ್ಷಯರೋಗದ ಲಕ್ಷಣಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಒಂದು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ ಬರುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಒಂದು ವೇಳೆ ಈ ಲಕ್ಷಣಗಳು ಕಂಡುಬಂದಲ್ಲಿ ಯಾವ ರೀತಿ ಕಫ ತೆಗೆಯಬೇಕು ಎಂಬ ವಿಧಾನವನ್ನು ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ. ನಿರೂಪಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಗಣೇಶ, ವೈದ್ಯಾಧಿಕಾರಿ ಡಾ| ಶಿವಕುಮಾರ, ಡಾ| ಅಹಮದಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಲಕ್ಷ್ಮೀ ಮಂಡಾಸ್, ಸಂಧ್ಯಾ, ಕ್ಷಯರೋಗ ನಿಯಂತ್ರಣ ಕಚೇರಿ ಸಿಬ್ಬಂದಿ, ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.