Advertisement

ರಾಯಚೂರು ವಿವಿ ವೇಗ ತಗ್ಗಿಸಿದ ಅನುದಾನ

12:54 PM Mar 10, 2022 | Team Udayavani |

ರಾಯಚೂರು: ಕಳೆದ ಬಜೆಟ್‌ನಲ್ಲಿ ಬಿಡಿಗಾಸು ಸಿಗದೆ ಕಂಗಾಲಾಗಿದ್ದ ರಾಯಚೂರು ವಿಶ್ವವಿದ್ಯಾಲಯಕ್ಕೆ ಈ ಬಾರಿ 15 ಕೋಟಿ ಸಿಕ್ಕಿರುವುದು ಹೊಸ ಆಶಾಭಾವ ಮೂಡಿಸಿದೆ.

Advertisement

ಬೇಡಿಕೆ ಬಹಳಷ್ಟಿತ್ತಾದರೂ ಈ ಬಾರಿ ಕಡೆಗಣನೆಗೆ ಒಳಗಾಗಲಿಲ್ಲ ಎಂಬ ಸಮಾಧಾನ ಹಾಗೂ ಹೊಸ ಆಶಯದೊಂದಿಗೆ ಮುನ್ನಡೆದಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಅರ್ಧ ಮುಗಿದಿದ್ದು ಸೆಮಿಸ್ಟರ್‌ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ.

ದ್ವಿತೀಯ ವರ್ಷದ ಸ್ನಾತಕೋತ್ತರ ವಿಭಾಗದಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರೆ, ಈ ವರ್ಷ 700ಕ್ಕೂ ಅಧಿಕ ವಿದ್ಯಾರ್ಥಿಗಳ ಪ್ರವೇಶಾತಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದಲೂ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅನುದಾನ ಹರಿದು ಬರಬಹುದು ಎಂಬ ಲೆಕ್ಕಾಚಾರ ಈಡೇರಿಲ್ಲ. ಕೆಕೆಆರ್‌ಡಿಬಿಗೆ ಈ ವರ್ಷ ಮೂರು ಸಾವಿರ ಕೋಟಿ ರೂ. ಘೋಷಿಸಿರುವುದು ಅನುದಾನದ ಆಸೆಯನ್ನು ಜೀವಂತವಾಗಿಸಿದೆ.

ವಿಶ್ವವಿದ್ಯಾಲಯದ ಎದುರು ಸಾಕಷ್ಟು ಸವಾಲುಗಳಿವೆ. 20ಕ್ಕೂ ಅಧಿಕ ವಿಭಾಗಗಳನ್ನು ಆರಂಭಿಸಿದ್ದು, ಅವುಗಳಿಗೆ ಪ್ರತ್ಯೇಕ ತರಗತಿ ಕೊಠಡಿ, ಪ್ರಯೋಗಾಲಯ ನಿರ್ಮಿಸಬೇಕಿದೆ. ವಿಷಯವಾರು ಬ್ಲಾಕ್‌ ಗಳನ್ನು ನಿರ್ಮಿಸಬೇಕಿದೆ.

ವಿದ್ಯಾರ್ಥಿ ನಿಲಯಗಳು, ಗ್ರಂಥಾಲಯ, ರಸ್ತೆ, ನೀರಿನ ಸೌಲಭ್ಯ ಹೀಗೆ ಅನೇಕ ಸೌಲಭ್ಯ ಕಲ್ಪಿಸಬೇಕಿದೆ. ಈಗ ಸಿಕ್ಕಿರುವ 15 ಕೋಟಿ ಅನುದಾನದಲ್ಲಿ ಅಗತ್ಯವಿರುವ ಪೀಠೊಪಕರಣ ಖರೀದಿ, ತುರ್ತು ಕೆಲಸಗಳಿಗೆ ಸಾಕಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಶೇ.30ರಷ್ಟು ಶಿಕ್ಷಣಕ್ಕೆ ಆದ್ಯತೆ

ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಪ್ರಗತಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿ ಸಾವಿರಾರು ಕೋಟಿ ಹಣ ನೀಡುತ್ತಿದೆ. ಇಷ್ಟು ವರ್ಷ 1500 ಕೋಟಿ ನೀಡಿದ್ದರೆ, ಈ ವರ್ಷದಿಂದ ಮೂರು ಸಾವಿರ ಕೋಟಿ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ, ಆ ಹಣದಲ್ಲಿ ಪ್ರತಿ ವರ್ಷ ಶೇ.30ರಷ್ಟು ಹಣವನ್ನು ಶಿಕ್ಷಣಕ್ಕೆ ಖರ್ಚು ಮಾಡಬೇಕು ಎಂಬ ನಿಯಮವಿದೆ. ಕಳೆದ ವರ್ಷ ರಾಯಚೂರು ವಿಶ್ವವಿದ್ಯಾಲಯ ಸುಮಾರು 190 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೆಕೆಆರ್‌ಡಿಬಿಗೆ ಸಲ್ಲಿಸಿತ್ತು. ಆದರೆ, ಈವರೆಗೂ ಬಿಡಿಗಾಸು ಕೊಟ್ಟಿಲ್ಲ. 2021-2022ನೇ ಸಾಲಿನ ಬಾಕಿ 700 ಕೋಟಿ ಹಣವನ್ನು ಈಚೆಗೆ ಬಿಡುಗಡೆ ಮಾಡಿದ್ದು, ಮಾರ್ಚ್‌ ಅಂತ್ಯದೊಳಗೆ ಖರ್ಚು ಮಾಡಬೇಕಿರುವ ಕಾರಣ ಅದರಲ್ಲಿ ವಿವಿಗೆ ಹಣ ನೀಡಿದರೆ ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಹಣವೇ ಬೇಕಿಲ್ಲ, ಕೆಲಸ ಮಾಡಲಿ

ಸರ್ಕಾರ ವಿಶ್ವವಿದ್ಯಾಲಯಕ್ಕೆ ಹಣವೇ ನೀಡಬೇಕೆಂದಿಲ್ಲ. ಬದಲಿಗೆ ನಮಗೆ ಬೇಕಿರುವ ಕಟ್ಟಡಗಳು, ಸೌಲಭ್ಯಗಳನ್ನು ಕಲ್ಪಿಸಿದರೂ ಸಾಕು ಎನ್ನುವುದು ವಿವಿ ಅಧಿಕಾರಿಗಳ ಒತ್ತಾಯವಾಗಿದೆ. ಯಾವುದಾದರೂ ಯೋಜನೆಯಡಿ ಸೌಲಭ್ಯಗಳನ್ನು ನೀಡಲಿ. ಅದರಲ್ಲೂ ಸಿವಿಲ್‌ ಕೆಲಸಗಳನ್ನು ಸರ್ಕಾರವೇ ಮಾಡಿದರೆ ಇನ್ನೂ ಅನುಕೂಲವಾಗುತ್ತದೆ. ಪ್ರಯೋಗಾಲಯಗಳು, ಒಳಾಂಗಣ ವಿನ್ಯಾಸ, ತರಗತಿಗಳ ರೂಪುರೇಷೆಗಳನ್ನು ನಮ್ಮಿಚ್ಛೆಯ ಪ್ರಕಾರ ಮಾಡಿಕೊಟ್ಟರೆ ಸಾಕು ಎನ್ನುತ್ತಾರೆ ಅಧಿಕಾರಿಗಳು.

ಬೆಳಗ್ಗೆ ಸಂಜೆ ತರಗತಿ

ವಿದ್ಯಾರ್ಥಿಗಳ ಸಂಖ್ಯೆಯನುಸಾರ ಕೊಠಡಿಗಳು ಇಲ್ಲದ ಕಾರಣ ಈಗ ಬೆಳಗ್ಗೆ ಮತ್ತು ಸಂಜೆ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೂ ತರಗತಿಗಳನ್ನು ಹೊಂದಿಸುವುದು ಕಷ್ಟವಾಗುತ್ತಿದೆ. ಅಲ್ಲದೇ, ವಿಜ್ಞಾನದ ಕೆಲ ವಿಷಯಗಳನ್ನು ನಗರದ ಎಲ್‌ವಿಡಿ ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ಇನ್ನೂ ಪ್ರಯೋಗಾಲಯ ಸಿದ್ಧವಾಗದ ಕಾರಣ ಪ್ರಾಯೋಗಿಕ ತರಗತಿಗಳಿಗೂ ಬೇರೆ ಕಡೆ ಅವಲಂಬಿಸಬೇಕಿದೆ.

ಈ ಬಾರಿ ಹೆಚ್ಚು ಅನುದಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. 15 ಕೋಟಿ ಸಿಕ್ಕಿದೆ. ನಮಗೆ ಬೇಕಿರುವ ತುರ್ತು ಕೆಲಸಗಳಿಗೆ ಬಳಸಿಕೊಳ್ಳಲಾಗುವುದು. ಕೆಕೆಆರ್‌ಡಿಬಿಯಿಂದ ಈ ಭಾಗದ ಶೈಕ್ಷಣಿಕ ಚಟುವಟಿಕೆಗಳಿಗೆ ಹಣ ನೀಡಬಹುದಾಗಿದ್ದು, 190 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. -ಡಾ| ವಿಶ್ವನಾಥ, ಕುಲಸಚಿವ, ರಾಯಚೂರು ವಿವಿ

ಮುಖ್ಯಮಂತ್ರಿ ನವಲಿ ಸಮಾನಾಂತರ ಜಲಾಶಯಕ್ಕೆ ಒಂದು ಸಾವಿರ ಕೋಟಿ, ವಿಮಾನ ನಿಲ್ದಾಣಕ್ಕೆ 186 ಕೋಟಿ ನೀಡಿದ್ದು, ರಾಯಚೂರು ವಿವಿಗೆ 15 ಕೋಟಿ ಕೊಟ್ಟಿದ್ದಾರೆ. ಕೆಕೆಆರ್‌ಡಿಬಿಗೆ 3 ಸಾವಿರ ಕೋಟಿ ನೀಡಿದ್ದರಿಂದ ಮೈಕ್ರೋ, ಮ್ಯಾಕ್ರೋ ಯೋಜನೆಯಡಿ ವಿವಿಯಲ್ಲಿ ಅನುದಾನ ಕೈಗೊಳ್ಳಲು ಸಹಕರಿಸಲಾಗುವುದು. -ಡಾ| ಶಿವರಾಜ್‌ ಪಾಟೀಲ್‌, ನಗರ ಶಾಸಕ

ಸರ್ಕಾರ ರಾಯಚೂರು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕಿತ್ತು. 15 ಕೋಟಿ ಯಾವುದಕ್ಕೂ ಸಾಲುವುದಿಲ್ಲ. ಕಳೆದ ವರ್ಷ ನಮ್ಮ ಅನುದಾನದಡಿ ಹಣ ನೀಡಿದ್ದೇವೆ. -ಬಸನಗೌಡ ದದ್ದಲ್‌, ಗ್ರಾಮೀಣ ಶಾಸಕ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next