ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಸರ್ವಾಂಗೀಣ ಪ್ರಗತಿಗೆ ಶಾಸಕರ ಅನುದಾನದಡಿ 2 ಕೋಟಿ ರೂ. ನೀಡುವುದಾಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಕುಲಪತಿ ಮತ್ತು ಕುಲಸಚಿವರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ನನ್ನ ವೃತ್ತಿ, ನನ್ನ ಜನ್ಮ ಭೂಮಿ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಈ ವಿಶ್ವವಿದ್ಯಾಲಯ ಪ್ರಗತಿ ಹೊಂದಲು ಸಾಧ್ಯ. ವಿಶ್ವವಿದ್ಯಾಲಯಕ್ಕೆ 371 (ಜೆ)ಗೆ ಬರುವಂತ ಅನುದಾನ ಬಳಸಲು ಅವಕಾಶವಿದೆ. ಈ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದರು.
ಶಿಕ್ಷಣ, ಅಭಿವೃದ್ಧಿ, ಉದ್ಯೋಗ ಮೂರು ಪ್ರಮುಖ ಅಂಶಗಳು ಸಾಮಾಜಿಕ ಚಿತ್ರಣ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಅತಿಥಿ ಉಪನ್ಯಾಸಕರು ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ಕುಂದು ಕೊರತೆ ಹಾಗೂ ವಿವಿಯ ಮೂಲ ಸೌಲಭ್ಯಗಳ ಕುರಿತು ಚರ್ಚಿಸಿದರು.
ವಿವಿ ಕುಲಪತಿ ಪ್ರೊ| ಹರೀಶ ರಾಮಸ್ವಾಮಿ ಮಾತನಾಡಿ, ಆದರ್ಶ ವಿಶ್ವವಿದ್ಯಾಲಯ ಮಾಡುವ ದೃಢ ಸಂಕಲ್ಪದಿಂದ ಕಾರ್ಯಾರಂಭಿಸಿದ್ದೇವೆ. ಆರ್ಥಿಕ ಕೊರತೆ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆ ನಡುವೆಯೂ ವಿವಿ ಕಟ್ಟಲು ಶ್ರಮಿಸುತ್ತಿದ್ದೇವೆ ಎಂದರು.
ಯುಜಿಸಿ 2 ಎಫ್ ಮಾನ್ಯತೆ ನೀಡಿದ್ದರೂ ಬೋಧಕ ಸಿಬ್ಬಂದಿ ಆಗದಿದ್ದರೆ ಯುಜಿಸಿಯ 12ಬಿ ಮಾನ್ಯತೆ ಸಿಗುವುದಿಲ್ಲ. ಕೇವಲ 88 ಅತಿಥಿ ಉಪನ್ಯಾಸಕರಿಂದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಕೇವಲ ಮೂರು ಪ್ರಾಧ್ಯಾಪಕರು ಹಾಗೂ ಏಳು ಬೋಧಕೇತರ ಸಿಬ್ಬಂದಿ ಕಾಯಂ ನೌಕರರಾಗಿದ್ದು ವಿಶ್ವವಿದ್ಯಾಲಯದಲ್ಲಿ ಅನೇಕ ಸಿಬ್ಬಂದಿ ಆರು ತಿಂಗಳಿಂದ ವೇತನ ರಹಿತವಾಗಿ ಕೆಲಸ ಮಾಡುತ್ತಿದ್ದಾರೆ.
ತೀವ್ರತರ ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ ಎಂದರು. ಈ ವೇಳೆ ಕುಲಸಚಿವ ಪ್ರೊ| ವಿಶ್ವನಾಥ ಎಂ, ಮೌಲ್ಯಮಾಪನ ಕುಲಸಚಿವ ಪ್ರೊ| ಯರ್ರಿಸ್ವಾಮಿ ಎಂ., ಉಪ ಕುಲಸಚಿವ ಡಾ| ಜಿ.ಎಸ್. ಬಿರಾದಾರ್, ಸಿಡಿಸಿ ನಿರ್ದೇಶಕ ಡಾ| ರಾಘವೇಂದ್ರ ಫತ್ತೇಪುರ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ| ನುಸ್ರತ್ ಫಾತಿಮಾ, ದೈಹಿಕ ಶಿಕ್ಷಣ ನಿರ್ದೇಶಕ ವಾಸುದೇವ ಜೇವರ್ಗಿ ಸೇರಿದಂತೆ ಸಿಬ್ಬಂದಿ ಇದ್ದರು.