ರಾಯಚೂರು: ಇಲ್ಲಿನ ಎಪಿಎಂಸಿಯಲ್ಲಿ ರಜಾ ದಿನವಾದ ರವಿವಾರವೂ ಈರುಳ್ಳಿ ಖರೀದಿ ಜೋರಾಗಿ ನಡೆಯಿತು. ಆದರೆ, 15 ಸಾವಿರ ರೂ. ಗಡಿ ತಲುಪಿದ್ದ ಈರುಳ್ಳಿ 9950 ರೂ.ಗೆ ಮಾರಾಟವಾಯಿತು.
ಬೆಲೆ ದಿಢೀರ್ ಕುಸಿದ ಹಿನ್ನೆಲೆಯಲ್ಲಿ ಶನಿವಾರ ವರ್ತಕರು ಈರುಳ್ಳಿ ಖರೀದಿಗೆ ಮುಂದಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಒತ್ತಡಕ್ಕೆ ಮಣಿದ ಆಡಳಿತ ಮಂಡಳಿ, ರವಿವಾರ ರಜಾ ದಿನವಾದರೂ ಈರುಳ್ಳಿ ಖರೀದಿಸುವುದಾಗಿ ಭರವಸೆ ನೀಡಿತ್ತು. ಕೊಟ್ಟ ಮಾತಿನಂತೆ ರವಿವಾರ ಬೆಳಗ್ಗೆ ಖರೀದಿ ಶುರುವಾಯಿತಾದರೂ ದರ ಭಾರೀ ಕುಸಿತ ಕಂಡ ಪರಿಣಾಮ ರೈತರಿಗೆ ನಿರಾಸೆ ಮೂಡಿಸಿತು.
ಶುಕ್ರವಾರ 15 ಸಾವಿರ ರೂ.ಗೆ ಮಾರಾಟವಾಗಿದ್ದ ಈರುಳ್ಳಿ ರವಿವಾರ 9,950 ಗರಿಷ್ಠ ದರಕ್ಕೆ ಮಾರಾಟವಾಯ್ತು. ಇನ್ನು 2350 ರೂ. ಕನಿಷ್ಠ ದರ ನಿಗದಿ ಮಾಡಲಾಗಿತ್ತು. ಶುಕ್ರವಾರ ಮಾರಾಟವಾಗದ ಈರುಳ್ಳಿಯನ್ನು ಮೊದಲಿಗೆ ಖರೀದಿಸಲಾಯಿತು. ಬಳಿಕ ಶನಿವಾರ ತಂದ ಬೆಳೆ ಖರೀದಿಸಲಾಯಿತಾದರೂ ಶೇ.40ರಷ್ಟು ಮಾತ್ರ ಮಾರಾಟವಾಯಿತು. ಉಳಿದ ಬೆಳೆಯನ್ನು ಸೋಮವಾರ ಖರೀದಿಸುವುದಾಗಿ ವರ್ತಕರು ತಿಳಿಸಿದರು. ಈ ವಿಚಾರ ತಿಳಿದ ರೈತರು ರವಿವಾರ ಬೆಳೆಯನ್ನು ಮಾರುಕಟ್ಟೆಗೆ ತಂದಿರಲಿಲ್ಲ. 1250ಕ್ಕೂ ಅಧಿಕ ಕ್ವಿಂಟಲ್ ಈರುಳ್ಳಿ ಖರೀದಿ ಆಯಿತು.
ಬೆಲೆ ಕುಸಿತ ಪರಿಣಾಮ: ಎರಡೇ ದಿನದಲ್ಲಿ ಈರುಳ್ಳಿ ದರ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರುವುದರಿಂದ ರವಿವಾರ ರೈತರು ಮರು ಮಾತಾಡದೆ ಮಾರಾಟ ಮಾಡಿದ್ದಾರೆ.
ವಿದೇಶಗಳಿಂದ ಈರುಳ್ಳಿ ಆಮದು ಮಾಡಿಕೊಂಡಿದ್ದು, ಇನ್ನೂ ದರ ಕುಸಿಯುವ ಸಾಧ್ಯತೆ ಇದೆ ಎಂದ ಕಾರಣ ರೈತರು ಕೂಡ ಮರುಮಾತಾಡದೆ ವ್ಯಾಪಾರ ನಡೆಸಿದ್ದಾರೆ. ಆದರೆ, ಶನಿವಾರವೇ ಖರೀದಿಸಿದ್ದರೆ ನಮಗೆ ಉತ್ತಮ ಬೆಲೆ ಸಿಗುತ್ತಿತ್ತು ಎಂದು ರೈತರು ಪೇಚಾಡಿಕೊಂಡಿದ್ದು ಕಂಡು ಬಂತು.