ರಾಯಚೂರು: ಜಿಲ್ಲಾ ವೀರಶೈವ ಸಮಾಜ ಹಾಗೂ ಜಂಗಮ ಸಮಾಜದಿಂದ ಶನಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವೃತ್ತದ ಬಳಿ ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು. ಪಂಚಾಚಾರ್ಯರ ಧ್ವಜಾರೋಹಣ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ಜಿಲ್ಲಾ ವೀರಶೈವ ಸಮಾಜ ಹಾಗೂ ಜಂಗಮ ಸಮಾಜದವರು ಒಗ್ಗೂಡಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿ ಕೊಂಡಿರುವುದು ಉತ್ತಮ ಕಾರ್ಯ. ಜಗದ್ಗುರು ರೇಣುಕಾಚಾರ್ಯರು ಈ ಯುಗ ಕಂಡ ಮಹಾಪುರುಷರು ಎಂದರು.
ಶ್ರೀ ವೀರಶೆ„ವ ಮಹಾಂತೇಶ ಕಲ್ಯಾಣ ಮಂಟಪದಲ್ಲಿಯೂ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು. ನಂತರ ಶ್ರೀಗಳು ಸಭೆಯನ್ನುದೇಶಿಸಿ ಧರ್ಮ ಸಂದೇಶ ನೀಡಿದರು.
ಸಮಾಜದ ಹಿರಿಯರಾದ ಪಂಪಾಪತಿ ಶಾಸ್ತ್ರಿ, ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಎಂ. ವೀರನಗೌಡ, ವೀರಶೈವ ರುದ್ರಸೇನಾ ಸಮಿತಿ ಸದಸ್ಯರು, ಜಂಗಮ ಸಮಾಜ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.