Advertisement

ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ಸಂಗ್ರಹಿಸಿ

12:04 PM Oct 04, 2019 | Naveen |

ರಾಯಚೂರು: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಅಗತ್ಯವಿರುವ ಪ್ರಮಾಣಿತ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ವಿತರಣೆಗೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2019-20ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಪೂರೈಸುವ ಕುರಿತ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಕೆಲವೊಂದು ಕಡೆ ಮಳೆ ಅನಿಶ್ಚಿತತೆಯಿಂದ ಬಿತ್ತನೆ ಸಾಧ್ಯವಾಗಿಲ್ಲ. ಇದೀಗ ಹಿಂಗಾರು ಹಂಗಾಮಿನಲ್ಲಿ ಮಳೆಯಾಗುತ್ತಿದ್ದು, ಮುಂಗಾರು, ಹಿಂಗಾರು ಎರಡೂ ಹಂಗಾಮಿನ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬರಲಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಿ ಎಂದು ಹೇಳಿದರು.

ಮುಂಗಾರು ಹಂಗಾಮಿಗೆ ಕಡಲೆ, ಜೋಳ ಹಾಗೂ ಶೇಂಗಾ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ಭತ್ತದ ನಂತರ ಕಡಲೆ ಹೆಚ್ಚು ಬೇಡಿಕೆಯ ಬೆಳೆಯಾಗಿದ್ದು, ಅವುಗಳನ್ನು ಪೂರೈಸಲು ಬೀಜ ನಿಗಮ ಸೇರಿ ಸಂಬಂಧಿ ಸಿದ ಏಜೆನ್ಸಿಗಳೊಂದಿಗೆ ಚರ್ಚಿಸಿ ಅವುಗಳನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಹಿಂಗಾರು ಹಂಗಾಮಿನಲ್ಲಿ 1,51,728 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಬೇಕಿದೆ. 25,035 ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆಯಿದ್ದು, 20,902 ಕ್ವಿಂಟಲ್‌ ಲಭ್ಯವಿದೆ. 80,380 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಬೇಕಿದ್ದು, ಅದಕ್ಕೆ 1,989 ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆಯಿದ್ದು, 500 ಕ್ವಿಂಟಲ್‌ನಷ್ಟು ಲಭ್ಯವಿದೆ. 38,815 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲು 18,902 ಕ್ವಿಂಟಲ್‌ ಬಿತ್ತನೆ ಬೀಜದ ಅವಶ್ಯಕತೆಯಿದ್ದು, 20,000 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ ಲಭ್ಯವಿದೆ. ಅಗತ್ಯವಿರುವ ಬಿತ್ತನೆ ಬೀಜಗಳನ್ನು ರಾಜ್ಯ ಬೀಜ ನಿಗಮ ಸೇರಿದಂತೆ ವಿವಿಧೆಡೆಯಿಂದ ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Advertisement

ರಸಗೊಬ್ಬರಕ್ಕೆ ಸಂಬಂ ಧಿಸಿ ಹಿಂಗಾರು ಹಂಗಾಮಿಗೆ ಯೂರಿಯಾ 66,159 ಮೆಟ್ರಿಕ್‌ ಟನ್‌ನಷ್ಟು, ಡಿಎಪಿ 20,186 ಮೆಟ್ರಿಕ್‌ ಟನ್‌, ಎಂಒಪಿ 10,464 ಮೆಟ್ರಿಕ್‌ ಟನ್‌, ಎಸ್‌ಎಸ್‌ಪಿ 3,931 ಮೆಟ್ರಿಕ್‌ ಟನ್‌, 15:15:15 ಗೊಬ್ಬರ 1,713 ಮೆಟ್ರಿಕ್‌ ಟನ್‌, 10:26:26 ಗೊಬ್ಬರ 4,467 ಮೆಟ್ರಿಕ್‌ ಟನ್‌, 12:32:16 ಗೊಬ್ಬರ 1,548 ಮೆಟ್ರಿಕ್‌ ಟನ್‌, 14:35:14 ಗೊಬ್ಬರ 1,818 ಮೆಟ್ರಿಕ್‌ ಟನ್‌ನಷ್ಟು, 20:20:0 ಗೊಬ್ಬರ 13,059 ಮೆಟ್ರಿಕ್‌ ಟನ್‌, 16:20:0 ಗೊಬ್ಬರ 21,139 ಮೆಟ್ರಿಕ್‌ ಟನ್‌, 14:28:14 ಗೊಬ್ಬರ 1,377 ಮೆಟ್ರಿಕ್‌ ಟನ್‌, 28:28:0 ಗೊಬ್ಬರ 4,214 ಮೆಟ್ರಿಕ್‌ ಟನ್‌, 23:23:0 ಗೊಬ್ಬರ 3,696 ಮತ್ತು ಆಲ್‌ ಕಾಂಪ್ಲೆಕ್ಸ್‌ 58,333
ಮೆಟ್ರಿಕ್‌ ಟನ್‌ನಷ್ಟು ಜಿಲ್ಲೆಗೆ ಅಗತ್ಯವಿದೆ. ಅವುಗಳನ್ನು ರೈತರಿಗೆ ಪೂರೈಸುವುದಾಗಿ ತಿಳಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕರು, ಬೀಜ ನಿಗಮದ ಅಧಿಕಾರಿಗಳು ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next