Advertisement

ರಿಂಗ್‌ ರಸ್ತೆಗೆ ಅನುದಾನದ್ದೇ ಅಡಚಣೆ!

05:50 PM Mar 01, 2021 | Team Udayavani |

ರಾಯಚೂರು: ನಗರಾಭಿವೃದ್ಧಿ ಹಾಗೂ ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿರುವ ರಾಯಚೂರು ರಿಂಗ್‌ ರಸ್ತೆಗೆ ಆರಂಭಿಕ ವಿಘ್ನವೇ ನಿವಾರಣೆ ಆಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಂದಾಜು ವೆಚ್ಚ ಹೆಚ್ಚಾಗುತ್ತಿದ್ದು, ಅನುದಾನದ್ದೇ ದೊಡ್ಡ ಸವಾಲಾಗಿದೆ.

Advertisement

ರಿಂಗ್‌ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಭೂ ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಈಗಾಗಲೇ ಮೂರು ವರ್ಷ ಕಳೆಯುತ್ತಾ ಬಂದಿದೆ. ಈ ವರ್ತುಲ ರಸ್ತೆಗೆ ಸುಮಾರು 116 ಎಕರೆ ಪ್ರದೇಶ ಭೂಮಿಯ ಅಗತ್ಯವಿದ್ದು, ಆರ್‌ಡಿಎ 50 ಕೋಟಿ ರೂ. ಅಂದಾಜು ಮೊತ್ತದ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಸರ್ಕಾರ ಈವರೆಗೂ ಅನುದಾನ ಮಾತ್ರ ಬಿಡುಗಡೆ ಮಾಡಿಲ್ಲ. ಈಗಾಗಲೇ ಸರ್ವೇ ಕಾರ್ಯ ಕೂಡ ನಡೆದಿದ್ದು, ರೈತರ ಜತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಲಾಗಿತ್ತು. ಸಕಾಲಕ್ಕೆ ಅನುದಾನ ಬಿಡುಗಡೆಯಾಗಿದ್ದೇ ಆದಲ್ಲಿ ಇಷ್ಟೊತ್ತಿಗೆ ರಿಂಗ್‌ ರಸ್ತೆ ಒಂದು ಹಂತದ ಕಾಮಗಾರಿ ಕೂಡ ಮುಗಿದಿರಬೇಕಿತ್ತು.

¬ತುರ್ತು ಆಗಬೇಕಾದ ಕಾಮಗಾರಿ: ಲಿಂಗಸುಗೂರು ರಸ್ತೆಯಲ್ಲಿನ ಬೈಪಾಸ್‌ನಿಂದ ನೇರವಾಗಿ ಮಂತ್ರಾಲಯ ರಸ್ತೆ ಹಾಗೂ ಮಂತ್ರಾಲಯ ರಸ್ತೆಯಿಂದ ಹೈದರಾಬಾದ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಈಗಾಗಲೇ ಲಿಂಗಸುಗೂರು ರಸ್ತೆಯಿಂದ ಹೈದರಾಬಾದ್‌ ರಸ್ತೆಗೆ ಹೊರವಲಯದಲ್ಲಿ ಒಂದು ರಸ್ತೆ ನಿರ್ಮಿಸಿದ್ದು, ಭಾರೀ ವಾಹನಗಳ ದಟ್ಟಣೆಗೆ ತುಸು ಕಡಿವಾಣ ಬಿದ್ದಿದೆ.

ಆದರೂ ನಗರದಲ್ಲಿ ಭಾರೀ ವಾಹನಗಳ ಓಡಾಟಕ್ಕೇನು ಕಡಿವಾಣ ಬಿದ್ದಿಲ್ಲ. ಅಲ್ಲದೇ, ಮಂತ್ರಾಲಯಕ್ಕೆ ಇಲ್ಲವೇ ಹೈದರಾಬಾದ್‌ಗೆ ಹೋಗಬೇಕಾದವರು ನಗರ ಹಾಯ್ದು ಹೋಗದೆ ಬೇರೆ ಮಾರ್ಗಗಳಿಲ್ಲ. ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿರುವ ರಾಯಚೂರಿಗೆ ಈಗ ರಿಂಗ್‌ ರಸ್ತೆ ತುರ್ತು ಆಗಬೇಕಿರುವ ಕಾಮಗಾರಿಯಾಗಿದೆ.

ಇದಕ್ಕಾಗಿ ರಾಯಚೂರು ಸುತ್ತಮುತ್ತಲಿನ ಫಲವತ್ತಾದ ಭೂಮಿಯನ್ನೇ ಪಡೆಯದೆ ವಿಧಿ  ಇಲ್ಲ. ರೈತರಿಗೆ ಸರ್ಕಾರದ ದರಕ್ಕಿಂತ ಮೂರು ಪಟ್ಟು ಹೆಚ್ಚು ದರ ನೀಡಿ ಭೂಮಿ ಖರೀದಿಗೆ ಆರ್‌ ಡಿಎ ಒಪ್ಪಿತ್ತು. ಇದಕ್ಕೆ ಕೆಲ ರೈತರು ಕೂಡ ಸಮ್ಮತಿ ನೀಡಿದ್ದಾರೆ. ಅಲ್ಲದೇ, ಜಮೀನಿನಲ್ಲಿ ರಸ್ತೆ ಹೋದರೆ ಭೂಮಿ ಇನ್ನೂ ಹೆಚ್ಚಿನ ಬೇಡಿಕೆ ಬರಲಿದೆ ಎಂಬುದು ರೈತರ ಲೆಕ್ಕಾಚಾರವಿದೆ. ಆದರೆ, ಕೆಲ ರೈತರು ಮಾತ್ರ ಇದಕ್ಕೆ ಸಮ್ಮಿತಿಸಿಲ್ಲ.

Advertisement

125ರಿಂದ 180 ಕೋಟಿರೂ.ಗೆ ಹೆಚ್ಚಾದ ವೆಚ್ಚ
ಆರಂಭದಲ್ಲಿ ಅಂದಾಜು ವೆಚ್ಚ 125 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಅದು 180ಗೆ ಹೆಚ್ಚಾಗಿದೆ ಎಂದು ಖುದ್ದು ನಗರ ಶಾಸಕರೇ ಹೇಳಿದ್ದಾರೆ. ವರ್ಷದಿಂದ ವರ್ಷಕ್ಕೆ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ. ಅಲ್ಲದೇ, ಅನಿವಾರ್ಯತೆ ಕೂಡ ಇದೆ. ಸರ್ಕಾರ ಈ ದಿಸೆಯಲ್ಲಿ ಸಾಧ್ಯವಾದಷ್ಟು ಬೇಗ ಹಣ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಬೇಕಿದೆ.

ಹಲವು ಆಯಾಮಗಳಲ್ಲೂ ಅನುಕೂಲ
ಈಗಾಗಲೇ ಜಿಲ್ಲಾಡಳಿತ ಭವನ ನಿರ್ಮಾಣ ಕಾರ್ಯ ನಗರ ಹೊರವಲಯದಲ್ಲಿ ಶುರುವಾಗಿದ್ದು, ಅದಕ್ಕೆ ಬೈಪಾಸ್‌ ರಸ್ತೆ ಹತ್ತಿರವಾಗಿದೆ. ಇದರ ಜತೆಗೆ ಏರ್‌ಪೋರ್ಟ್‌ ನಿರ್ಮಾಣ ವಿಚಾರವು ಮುಂಚೂಣಿಯಲ್ಲಿದೆ. ವಡವಟ್ಟಿ ಹತ್ತಿರ ಐಐಐಟಿ ಕಾಮಗಾರಿ ಭರದಿಂದ ಸಾಗಿದೆ. ಇನ್ನೂ ರಾಯಚೂರು ಪ್ರತ್ಯೇಕ ವಿಶ್ವವಿದ್ಯಾಲಯ ಕೂಡ ತೆರೆದುಕೊಳ್ಳುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ರಿಂಗ್‌ ರಸ್ತೆ ತುಂಬಾ ಉಪಯುಕ್ತವಾಗಲಿದೆ.

ರಿಂಗ್‌ ರಸ್ತೆ ಅಂದಾಜು ಮೊತ್ತ ಈಗ 180 ಕೋಟಿ ಎಂದು ಅಂದಾಜಿಸಲಾಗಿದೆ. ಇದಕ್ಕೆ ಬೇಕಾದ ಅನುದಾನ ಎಲ್ಲಿಂದ ಪಡೆಯಬೇಕು ಎಂಬುದೇ ಸವಾಲಾಗಿದೆ.
ರಾಜ್ಯ ಸರ್ಕಾರದಿಂದಲೋ, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದಿಂದ ಪಡೆಯಬೇಕೋ ಚಿಂತಿಸಲಾಗುತ್ತಿದೆ.
ಡಾ| ಶಿವರಾಜ್‌ ಪಾಟೀಲ್‌, ನಗರ ಶಾಸಕ

ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next