Advertisement
ಬಡ ಜನರ ಸ್ವಂತ ಮನೆ ಕನಸಿಗೆ ನೀರೆರೆಯಲು ಆರ್ ಡಿಎ ದಶಕದ ಹಿಂದೆ ಸಿದ್ರಾಂಪುರ ಬಡಾವಣೆ ನಿರ್ಮಿಸಿತ್ತು. ಆದರೆ, ಈವರೆಗೂ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡಿಲ್ಲ. 2010ರಲ್ಲಿ ನಿರ್ಮಿಸಿದ್ದ ಈ ಬಡಾವಣೆಯ ಉದ್ದೇಶವೇ ಈಡೇರಿಲ್ಲ. ಅದಕ್ಕೆ ತಾಂತ್ರಿಕ ವಿಭಾಗದ ಅಧಿಕಾರಿಗಳ ಯಡವಟ್ಟು ಕಾರಣವಾಗಿದ್ದು, ಈವರೆಗೂ ಹಣ ಪಾವತಿಸಿದವರು ನಮಗೆ ನಿವೇಶನ ಸಿಗಬಹುದೇ ಎಂದು ಕಾಯುತ್ತ ಕೂರುವಂತಾಗಿದೆ. 51.21 ಎಕರೆ ಪ್ರದೇಶದಲ್ಲಿ 651 ನಿವೇಶನಗಳನ್ನು ನಿರ್ಮಿಸಲಾಗಿತ್ತು. 2010ರ ಅಕ್ಟೋಬರ್‌ನಲ್ಲಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಕಡಿಮೆ ದರಕ್ಕೆ ನಿವೇಶನ ಸಿಕ್ಕುತ್ತದಲ್ಲ ಎಂದು ಜನ ಕೂಡ ಹಣ ತುಂಬಿ ತಮ್ಮ ನಿವೇಶನ ಕಾಯ್ದಿರಿಸಿಕೊಂಡಿದ್ದರು. ಸಾಕಷ್ಟು ಜನ ಮುಂಗಡ ಹಣ ಪಾವತಿಸಿ ಅರ್ಜಿ ಹಾಕಿದ್ದರು. 2011ರಲ್ಲಿ ಅವರಿಗೆಲ್ಲ ನಿವೇಶನ ಹಂಚಿಕೆ ಮಾಡಿ ಪೂರ್ಣ ಹಣ ಕಟ್ಟಿಸಿಕೊಳ್ಳಲಾಗಿತ್ತು. 120ಕ್ಕೂ ಅಧಿಕ ಜನ ಪೂರ್ಣ ಹಣ ಕಟ್ಟಿದ್ದರು.
ಒಟ್ಟು 51.21 ಎಕರೆ ಜಮೀನಿನಲ್ಲಿ ತಾಂತ್ರಿಕ ಅಧಿಕಾರಿಗಳು ಬೆಟ್ಟ ಗುಡ್ಡಗಳನ್ನು ಸೇರಿಸಿ ಸರ್ವೆ ಮಾಡಿದ್ದೇ ಸಮಸ್ಯೆಗೆ ಕಾರಣವಾಯ್ತು. 651 ನಿವೇಶನದಲ್ಲಿ ಸುಮಾರು 270ಕ್ಕೂ ಅಧಿಕ ನಿವೇಶನಗಳನ್ನು ರೂಪಿಸಲು ಆಗಲಿಲ್ಲ. ಇದಕ್ಕೆ ಪರ್ಯಾಯ ಮಾರ್ಗ ತಿಳಿಯದಾದಾಗ 2017ರಲ್ಲಿ ಅರ್ಜಿದಾರರಿಗೆ ಹಣ ಹಿಂಪಡೆಯುವಂತೆ ಆರ್‌ಡಿಎ ನೋಟಿಸ್ ನೀಡಿತ್ತು. ಆದರೆ, ಇಂದಲ್ಲ ನಾಳೆ ನಮಗೆ ನಿವೇಶನ ಸಿಗಬಹುದಲ್ಲ ಎಂಬ ಆಶಾಭಾವದೊಂದಿಗೆ ಅನೇಕರು ಹಣ ಹಿಂಪಡೆದಿಲ್ಲ. 10 ಎಕರೆಗೆ ಪ್ರಸ್ತಾವನೆ?
ಒಂದೆಡೆ ಅರ್ಜಿದಾರರು ಬಿಗಿಪಟ್ಟು ಹಿಡಿದಿದ್ದು, ನಮಗೆ ನಿವೇಶನ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಪಟ್ಟು ಬಿಡದೆ ನಿರಂತರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಮತ್ತೂಂದೆಡೆ ಆರ್‌ಡಿಎ ಕೂಡ ಇಂದಿಗೂ ನಿವೇಶನ ನೀಡುವುದಾಗಿಯೇ ತಿಳಿಸುತ್ತಿದೆ. ಇದರಿಂದ ಇಬ್ಬರ ನಡುವಿನ ಹಗ್ಗ ಜಗ್ಗಾಟ ದಶಕ ಕಳೆದರೂ ನಡೆಯುತ್ತಿದೆ. ಅದರ ಅಕ್ಕಪಕ್ಕದಲ್ಲಿ 10 ಎಕರೆ ಸ್ಥಳ ಸ್ವಾಧಿಧೀನಪಡಿಸಿಕೊಳ್ಳಲು ಆರ್‌ಡಿಎ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದು ಬಂದಿದ್ದು, ಒಂದು ವೇಳೆ ಅದು ಈಡೇರಿದರೆ ಮಾತ್ರ ಈ ಸಮಸ್ಯೆಗೊಂದು ಅಂತ್ಯ ಸಿಗಬಹುದು.
Related Articles
ಸಿದ್ರಾಂಪುರ ಬಡಾವಣೆ ರೂಪಿಸಿದಾಗ ರಸ್ತೆ, ವಿದ್ಯುತ್ ಕಂಬಗಳನ್ನು ಹಾಕಲಾಗಿತ್ತು. ಯಾವಾಗ ಈ ಗೊಂದಲ ಶುರುವಾಗುತ್ತಿದ್ದಂತೆ ಅದರ ಅಭಿವೃದ್ಧಿ ಕೈಬಿಡಲಾಗಿದೆ. ಈಗ ಅಲ್ಲಿ ಸಂಪೂರ್ಣ ಜಾಲಿ ಕಂಟಿ ಬೆಳೆದು ನಿಂತಿದೆ. ಚರಂಡಿ, ಸುಸಜ್ಜಿತ ರಸ್ತೆ, ಉದ್ಯಾನವನ ಸೇರಿದಂತೆ ಯಾವೊಂದು ಸೌಲಭ್ಯಗಳು ಆಗಿಲ್ಲ. ಅದನ್ನು ಕಂಡವರಿಗೆ ದಶಕವಲ್ಲ ಶತಮಾನವಾದರೂ ಈ ಬಡಾವಣೆ ಸಿದ್ಧಗೊಳ್ಳುವುದಿಲ್ಲ ಎಂಬ ಸಂದೇಹ ಮೂಡದಿರದು.
Advertisement
2010ರಲ್ಲಿ ಸಿದ್ರಾಂಪುರ ಬಳಿ ಆರ್‌ಡಿಎ ನಿರ್ಮಿಸಿದ ನಿವೇಶನ ಕೆಲ ತಾಂತ್ರಿಕ ಸಮಸ್ಯೆಗಳಿಂದ ಅಪೂರ್ಣಗೊಂಡಿದೆ. ಆಗ ಹಣ ಕಟ್ಟಿದವರಿಗೆ ನಿವೇಶನ ನೀಡಲು ಅಕ್ಕಪಕ್ಕದಲ್ಲೇ ಜಮೀನು ನೀಡಲು ಪ್ರಸ್ತಾವನೆ ನೀಡಿದ್ದೇವೆ. ಒಂದು ವೇಳೆ ಹಣ ಬೇಕು ಎನ್ನುವವರಿಗೆ ಬಡ್ಡಿ ಸಹಿತ ಹಿಂದಿರುಗಿಸಲಾಗುವುದು. ಕೇಂದ್ರ ಕಚೇರಿ ಬಡಾವಣೆಗೆ ಸಂಬಂಧಿಸಿ ಮಾಹಿತಿ ಕೇಳಿದ್ದು, ನೀಡಲಾಗಿದೆ. ಆದರೆ, ಅರ್ಜಿದಾರರಿಗೆ ಯಾವುದೇ ಆತಂಕ ಬೇಡ.ಶರಣಪ್ಪ
ಪ್ರಭಾರ ಆಯುಕ್ತ, ಆರ್‌ಡಿಎ ಆರ್‌ಡಿಎ ಈ ಬಡಾವಣೆ ನಿರ್ಮಿಸಿದ್ದರಿಂದ ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಿತ್ತು. ಅದೇ ನಿರೀಕ್ಷೆಯಲ್ಲಿಯೇ ಹಣ ಕಟ್ಟಿದ್ದೆವು. ಆದರೆ, ಈವರೆಗೂ ನಮಗೆ ನಿವೇಶನ ಹಂಚಿಕೆ ಮಾಡಿಲ್ಲ. ಈವರೆಗೂ ಮಾಡುತ್ತೇವೆ ಎನ್ನುತ್ತಾರೆ. ಅರ್ಜಿದಾರರೆಲ್ಲ ಒಗ್ಗೂಡಿ ಹೋರಾಟ ನಡೆಸಿದ್ದೇವೆ.
ಶ್ರೀಧರ, ಫಲಾನುಭವಿ ಸಿದ್ಧಯ್ಯಸ್ವಾಮಿ ಕುಕುನೂರು