Advertisement

ಬಿಜೆಪಿಯಲ್ಲೂ ಚಿಗುರೊಡೆದ ಅಧಿಕಾರದಾಸೆ!

12:07 PM Mar 13, 2020 | Naveen |

ರಾಯಚೂರು: ಚುನಾಯಿತರಾದರೂ ಅಧಿಕಾರ ವಿಲ್ಲದೇ ಹಲ್ಲು ಕಿತ್ತ ಹಾವಿನಂತಾಗಿದ್ದ ಜನಪ್ರತಿನಿಧಿಗಳಿಗೆ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟಗೊಂಡಿರುವುದು ಹಾಲು ಹೋಳಿಗೆ ಉಂಡಷ್ಟು ಖುಷಿಯಾಗಿದೆ. ಅದರ ಬೆನ್ನಲ್ಲೆ ರಾಜಕೀಯ ಲೆಕ್ಕಾಚಾರ ಜೋರಾಗಿದ್ದು, ಅತಂತ್ರ ಫಲಿತಾಂಶದ ಲಾಭ ಪಡೆಯಲು ಕಾಂಗ್ರೆಸ್‌, ಬಿಜೆಪಿಯಲ್ಲಿ ಲೆಕ್ಕಾಚಾರ ಜೋರಾಗಿದೆ.

Advertisement

ಒಟ್ಟು 35 ಸದಸ್ಯ ಬಲದ ರಾಯಚೂರು ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಬಿಜೆಪಿ 12 ಸ್ಥಾನ ಪಡೆದರೆ, ಕಾಂಗ್ರೆಸ್‌ 11 ಸ್ಥಾನ ಗಳಿಸಿತ್ತು. ಇನ್ನು ಜೆಡಿಎಸ್‌ 3 ಸ್ಥಾನಕ್ಕೆ ತೃಪ್ತಿಪಟ್ಟರೆ, 9 ಪಕ್ಷೇತರರು ಗೆಲುವು ದಾಖಲಿಸಿದ್ದರು. ಆದರೆ, ಪಕ್ಷೇತರರೆಲ್ಲ ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣಕ್ಕೆ ಬಂಡಾಯ ಸಾರಿ ಗೆದ್ದಿದ್ದರು. ಈಗ ಅವರು ಕಾಂಗ್ರೆಸ್‌ ಜತೆ ನಿಲ್ಲುವರೋ ಇಲ್ಲವೋ ಎನ್ನುವುದರ ಮೇಲೆ ಆಡಳಿತ ರಚನೆ ಪ್ರಹಸನ ನಿಂತಿದೆ.

ಈಗಿನ ಪರಿಸ್ಥಿತಿ ಕಾಂಗ್ರೆಸ್‌ಗೆ ಎಷ್ಟು ಅನುಕೂಲಕರವಾಗಿದೆಯೋ ಬಿಜೆಪಿಗೂ ಅಷ್ಟೇ ಪೂರಕವಾಗಿದೆ. ಇದೇ ಕಾರಣಕ್ಕೆ ಬಿಜೆಪಿಯಲ್ಲೂ ಆಡಳಿತ ಚುಕ್ಕಾಣಿ ಹಿಡಿಯುವ ತವಕ ಶುರುವಾಗಿದ್ದು, ಅದಕ್ಕಾಗಿ ಏನು ಮಾಡಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಕಾಂಗ್ರೆಸ್‌ ಒಳಜಗಳ: ಕಾಂಗ್ರೆಸ್‌ ಕೇವಲ 11 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲು ಪಕ್ಷದಲ್ಲಿನ ಒಳಜಗಳವೇ ಪ್ರಮುಖ ಕಾರಣ. ಮಾಜಿ ಶಾಸಕ ಸೈಯ್ಯದ್‌ ಯಾಸಿನ್‌ ಹಾಗೂ ಎಂಎಲ್‌ಸಿ ಎನ್‌.ಎಸ್‌ .ಬೋಸರಾಜ್‌ ಬಣಗಳ ಪ್ರತಿಷ್ಠೆಯಿಂದಾಗಿ ಪಕ್ಷದಲ್ಲಿ ಆಂತರಿಕ ಕಲಹ ಹೆಚ್ಚಾಗಿತ್ತು. ಎರಡೆರಡು ಕಡೆ ಪಕ್ಷದ ಟಿಕೆಟ್‌ ಹಂಚಿಕೆ ಮಾಡಲಾಗಿತ್ತು. ಆದರೆ, ಬಿ ಫಾರಂಗಳು ಅರ್ಹರಿಗೆ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬಂತು. ಟಿಕೆಟ್‌ ಹಂಚಿಕೆಯಲ್ಲಾದ ಯಡವಟ್ಟುಗಳು, ಗುಂಪುಗಾರಿಕೆ ಪಕ್ಷವನ್ನು ಇಬ್ಭಾಗ ಮಾಡಿತ್ತು.

ಇದೇ ಕಾರಣಕ್ಕೆ ಪಕ್ಷೇತರರನ್ನು ಗೆಲ್ಲಿಸಲು ಕಾಂಗ್ರೆಸ್‌ನ ಒಂದು ಗುಂಪಿನ ನಾಯಕರೇ ಪ್ರಚಾರ ಮಾಡಿದ್ದರು. ಹೀಗಾಗಿ ಈಗಲೂ ಪ್ರತಿಷ್ಠೆ ಪಣಕ್ಕಿಟ್ಟಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಕೈ ತಪ್ಪುವುದರಲ್ಲಿ ಸಂದೇಹ ಬೇಡ. ಅಧ್ಯಕ್ಷ ಸ್ಥಾನ ಬಿಸಿಎ, ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿದ್ದು, ಉಭಯ ಗುಂಪುಗಳಲ್ಲೂ ಆಕಾಂಕ್ಷಿಗಳಿದ್ದಾರೆ. ಇನ್ನು ಬಿಜೆಪಿಯಲ್ಲೂ ಆ ವರ್ಗದ ಸದಸ್ಯರಿದ್ದಾರೆ. ಒಂದು ವೇಳೆ ಪಕ್ಷಕ್ಕೆ ಬೆಂಬಲ ನೀಡಿದಲ್ಲಿ ಅಧಿಕಾರ ನೀಡುವ ಆಮಿಷವೊಡ್ಡಿ ಪಕ್ಷೇತರರನ್ನು ಸೆಳೆಯುವ ಸಾಧ್ಯತೆಗಳಿವೆ.

Advertisement

ವಿಶ್ವಾಸದಲ್ಲಿ ಶಾಸಕ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸ್ಥಳೀಯ ಕ್ಷೇತ್ರದಲ್ಲೂ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಯಲ್ಲೂ ಪಾರುಪತ್ಯ ಸಾಧಿಸಬೇಕು. ಅದಕ್ಕಾಗಿ ತಂತ್ರಗಾರಿಕೆ ಹೆಣೆಯಲು ಮುಂದಾಗಿದ್ದಾರೆ ನಗರ ಶಾಸಕ ಡಾ| ಶಿವರಾಜ ಪಾಟೀಲ. ಅಲ್ಲದೇ, ಅಧಿಕಾರಕ್ಕೆ ಬರುವುದು ನಾವೇ ಎನ್ನುವ ವಿಶ್ವಾದಲ್ಲಿಯೂ ಅವರಿರುವುದು ಅನುಮಾನಗಳಿಗೆ ಎಡೆಮಾಡಿದೆ.

ಯಾರಿಗೆ ಪಕ್ಷೇತರರ ಕೃಪೆ: ನಗರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗಿದ್ದು, ಯಾವ ಪಕ್ಷಕ್ಕೂ ಸೂಕ್ತ ಬೆಂಬಲ ಇಲ್ಲ. ಮೂರು ಸ್ಥಾನ ಗೆದ್ದ ಜೆಡಿಎಸ್‌ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದೆ. ಆದರೆ, ಪಕ್ಷೇತರರು ಎತ್ತ ವಾಲುವರೋ ಅವರಿಗೆ ಅಧಿಕಾರ ಖಚಿತ. ಕಾಂಗ್ರೆಸ್‌ನಲ್ಲಿ ಒಳಜಗಳ ಅಡ್ಡಿಯಾಗದಿದ್ದರೆ ಪಕ್ಷೇತರರು ಕೈ ಬಿಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಅಲ್ಲಿನ ಭಿನ್ನಮತ ಮುಂದುವರಿದರೆ ಬಿಜೆಪಿಗೆ ಅದರ ಲಾಭವಾಗಬಹುದು.

ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದ್ದು, ನಾವೇಕೆ ಆಡಳಿತ ನಡೆಸಬಾರದು. ರಾಯಚೂರು ನಗರಸಭೆಯಲ್ಲಿ ಖಂಡಿತ ಅಧಿಕಾರ ಹಿಡಿಯುತ್ತೇವೆ. ನನ್ನ ಮತ ಸೇರಿ 13 ಸಂಖ್ಯಾಬಲವಿದೆ. ಅಧಿಕಾರ ಹಿಡಿಯಲು ಏನೆಲ್ಲ ತಂತ್ರಗಾರಿಕೆ ಮಾಡುತ್ತೇವೋ ಹೇಳಲಾಗದು. ಆದರೆ, ಅಧಿಕಾರ ಹಿಡಿಯುವ ವಿಶ್ವಾಸ ಮಾತ್ರ ಇದೆ.
ಡಾ| ಶಿವರಾಜ ಪಾಟೀಲ,
ರಾಯಚೂರು ನಗರಸಭೆ ನಗರ ಬಿಜೆಪಿ ಶಾಸಕ

ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next