ರಾಯಚೂರು: ಕೊರೊನಾ ಹಾವಳಿಗೆ ಎಲ್ಲೆಡೆ ಬದುಕು ನಿಶ್ಚಲವಾಗಿದ್ದು, ಸರ್ಕಾರಕ್ಕೆ ಮುಖ್ಯವಾಗಿ ಆದಾಯ ಒದಗಿಸುತ್ತಿದ್ದ ಸಾರಿಗೆ ರಾಯಚೂರು ವಿಭಾಗ ಈವರೆಗೆ 11 ಕೋಟಿ ರೂ. ನಷ್ಟ ಎದುರಿಸಿದೆ. ನಿತ್ಯ ಸರಾಸರಿ ಏನಿಲ್ಲವೆಂದರೂ 50 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ, ಮಾ.22ರಿಂದ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಈವರೆಗೆ 8.5 ಕೋಟಿಗೂ ಅಧಿಕ ಹಾನಿಯಾಗಿದೆ. ಅದರ ಜತೆಗೆ ಯುಗಾದಿ ವೇಳೆ ಶ್ರೀಶೈಲಕ್ಕೆ ತೆರಳುವ ಭಕ್ತರಿಗಾಗಿ ವಿಶೇಷ ಸೇವೆ ನೀಡಲಾಗುತಿತ್ತು. ಅದರಿಂದ ಈ ವರ್ಷ 3 ಕೋಟಿ ರೂ. ಆದಾಯದ ನಿರೀಕ್ಷೆ ಹೊಂದಲಾಗಿತ್ತು. ಅದು ಕೂಡ ಕೈ ಕೊಟ್ಟಿದೆ.
ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಏಳು ಡಿಪೋಗಳಿದ್ದು, ಲಕ್ಸುರಿ, ಸಾಮಾನ್ಯ ಬಸ್‌ಗಳು ಸೇರಿ 660 ಬಸ್‌ಗಳು ಓಡಾಡುತ್ತಿವೆ. ಅದರಲ್ಲಿ ಆಂಧ್ರ, ತೆಲಂಗಾಣ ಕೂಡ ಸೇರಿವೆ. ಹೈದರಾಬಾದ್‌ನಲ್ಲಿ ಕೊರೊನಾ ಮೊದಲಿಗೆ ಕಂಡು ಬಂದ ಹಿನ್ನೆಲೆಯಲ್ಲಿ ಆಂಧ್ರ, ತೆಲಂಗಾಣದ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದ ನಿತ್ಯ 8-10 ಲಕ್ಷ ನಷ್ಟ ಉಂಟಾಗುತ್ತಿತ್ತು. ಕ್ರಮೇಣ ಬೆಂಗಳೂರು ಸೇರಿದಂತೆ ದೂರದೂರುಗಳ ಬಸ್ ಸಂಚಾರ ನಿಲ್ಲಿಸಲಾಯಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಾ.22ರಂದು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಈ ನಷ್ಟ ಇಲ್ಲಿಗೆ ನಿಲ್ಲುವುದಿಲ್ಲ. ಮೊದಲ ಲಾಕ್‌ಡೌನ್ ಏ.14ರ ವರೆಗೆ ಇರುವ ಕಾರಣ ಅಲ್ಲಿಯವರೆಗೂ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇಲ್ಲ. ಅಂದರೆ ಇನ್ನೂ 3.5 ಕೋಟಿ ರೂ. ಹಾನಿ ಖಚಿತವಾಗಿದೆ. ಅದಾದ ಬಳಿಕ ಪರಿಸ್ಥಿತಿ ಹೇಗಿರಲಿದೆ ಎಂಬುದರ ಮೇಲೆ ಲಾಭದ ನಿರೀಕ್ಷೆ ಹೊಂದಬಹುದು ಎನ್ನುತ್ತಾರೆ ಅಧಿಕಾರಿಗಳು.
ತುರ್ತು ಸೇವೆಗೆ ಲಭ್ಯ: ರಾಯಚೂರು ವಿಭಾಗದ ಎಲ್ಲ ಡಿಪೋಗಳಲ್ಲಿ 3200ಕ್ಕೂ ಅಧಿಕ ನೌಕರರಿದ್ದಾರೆ. ಈಗ ಕಚೇರಿ ಸಿಬ್ಬಂದಿ ಹೊರತುಪಡಿಸಿ ಎಲ್ಲ ಚಾಲಕ-ನಿರ್ವಾಹಕರಿಗೆ ರಜೆ ನೀಡಲಾಗಿದೆ. ತುರ್ತು ಸೇವೆಗೆಂದು ಚಾಲಕ, ಮೆಕ್ಯಾನಿಕ್‌ಗಳು ಸೇರಿ 10 ಜನ ಕೆಲಸ ಮಾಡುತ್ತಾರೆ. ತುರ್ತು ಸೇವೆ ಬೇಕಾದಾಗ ನೀಡಲು ಸಿದ್ಧರಿದ್ದೇವೆ. ಗುಳೆ ಹೋದವರನ್ನು ಕರೆ ತರಲು ಜಿಲ್ಲಾಡಳಿತ ಕೇಳಿದಲ್ಲಿ ವಾಹನ ವ್ಯವಸ್ಥೆ ಮಾಡಲು ಸಿದ್ಧ ಎನ್ನುತ್ತಾರೆ ವಿಭಾಗದ ಅಧಿಕಾರಿಗಳು.
ರಾಯಚೂರು ಸಾರಿಗೆ ವಿಭಾಗಕ್ಕೆ ನಿತ್ಯ ಸರಾಸರಿ 50 ಲಕ್ಷ ರೂ. ನಷ್ಟವಾಗುತ್ತಿದೆ. ಯುಗಾದಿ ಸೇರಿ ಮಾ.22ರಿಂದ ಈವರೆಗೆ 11 ಕೋಟಿಗೂ ಅಧಿಕ ಹಾನಿಯಾಗಿದೆ. ಸಂಪೂರ್ಣ ಸೇವೆ ಸ್ಥಗಿತಗೊಳಿಸಲಾಗಿದೆ.
ಜಿಲ್ಲಾಡಳಿತ ಈ ವೇಳೆ ತುರ್ತು ಸೇವೆಗೆ ನಮ್ಮ ಸೌಲಭ್ಯ ಕೇಳಿದರೆ ನೀಡಲು ಸಿದ್ಧ. ಈ ಬಗ್ಗೆ ಎಲ್ಲ ಸಿಬ್ಬಂದಿಗೂ ಈಗಾಗಲೇ ಸೂಚನೆ ನೀಡಲಾಗಿದೆ.
ವೆಂಕಟೇಶ,
ವಿಭಾಗೀಯ ನಿಯಂತ್ರಣಾಧಿಕಾರಿ,
ರಾಯಚೂರು