ರಾಯಚೂರು: ರಾಜ್ಯದಲ್ಲೇ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎನಿಸಿಕೊಂಡ ರಾಯಚೂರಿನ ರಾಜೇಂದ್ರ ಗಂಜ್ ಇತಿಹಾಸದಲ್ಲೇ ಮೊದಲ ಬಾರಿಗೆ ಆರು ದಿನಗಳ ಕಾಲ ವಹಿವಾಟು ಸ್ಥಗಿತಗೊಳಿಸಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ.21ರಿಂದ 26ವರೆಗೆ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಲಾಗಿದೆ.
ಬೇರೆ ಬೇರೆ ಕಾರಣಗಳಿಗೆ ಒಂದೆರಡು ದಿನಗಳ ಮಟ್ಟಿಗೆ ಗಂಜ್ ಬಂದ್ ಮಾಡಿದ್ದರೂ ಒಂದು ಕಾಯಿಲೆಗೋಸ್ಕರ ಬಂದ್ ಮಾಡುತ್ತಿರುವುದು ಮಾತ್ರ ಇದೇ ಮೊದಲ ಬಾರಿಗೆ ಎನ್ನುವುದು ವಿಶೇಷ. ಆ ಮೂಲಕ ಕೊರೊನಾ ಪರಿಣಾಮ ಎಪಿಎಂಸಿಗೂ ತಟ್ಟಿದೆ.
ಜಿಲ್ಲೆಯಲ್ಲಿ 2.37 ಲಕ್ಷ ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿ ಇದೆ. ನೀರಾವರಿ ಆಶ್ರಿತ ಪ್ರದೇಶವೂ ಒಳಪಟ್ಟಿರುವುದರಿಂದ ಭತ್ತ ಹೆಚ್ಚಾಗಿ ಬೆಳೆಯುತ್ತಾರೆ. ಅದರ ಜತೆಗೆ ಜೋಳ, ತೊಗರಿ, ಹತ್ತಿ ಇಲ್ಲಿನ ಪ್ರಮುಖ ಬೆಳೆ. ಜಿಲ್ಲೆ ಮಾತ್ರವಲ್ಲದೇ ಪಕ್ಕದ ಯಾದಗಿರಿ ಜಿಲ್ಲೆಯ ಜನರೂ ಇದೇ ಗಂಜ್‌ಗೆ ಬರುತ್ತಾರೆ. ಆಂಧ್ರ, ತೆಲಂಗಾಣದ ಸಾಕಷ್ಟು ರೈತರು ರಾಯಚೂರು ಎಪಿಎಂಸಿ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಈಗ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಿದ್ದರಿಂದ ಸಾವಿರಾರು ರೈತರಿಗೆ ಸಮಸ್ಯೆ ಸೃಷ್ಟಿಸಿದೆ.
2.37 ಕೋಟಿ ವಹಿವಾಟು: ರಾಯಚೂರು ಎಪಿಎಂಸಿ ಗಂಜ್‌ನಲ್ಲಿ ಸರಾಸರಿ 2.30 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. ಕೆಲವೊಮ್ಮೆ ಈ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಕಡಿಮೆಯಾಗುತ್ತದೆ. ಸರಾಸರಿಯಷ್ಟು ವಹಿವಾಟು ನಡೆದಲ್ಲಿ ಗಂಜ್‌ಗೆ 3.35 ಲಕ್ಷ ರೂ. ಶುಲ್ಕ ಸಂಗ್ರಹವಾಗಲಿದೆ. ಇನ್ನು ಹತ್ತಿ ಮಾರುಕಟ್ಟೆ ನಿರ್ವಹಣೆ ಕೂಡ ಇಲ್ಲಿಂದಲೇ ಆಗುವುದರಿಂದ ನಿತ್ಯ 4.33 ಲಕ್ಷ ರೂ. ವಹಿವಾಟು ನಡೆಯುತ್ತಿದ್ದು, 97 ಸಾವಿರ ರೂ. ಶುಲ್ಕ ಸಂಗ್ರಹವಾಗುತ್ತಿದೆ.
ಶೇಂಗಾ, ತೊಗರಿ, ಜೋಳ: ಎಪಿಎಂಸಿಯಲ್ಲಿ 100ಕ್ಕೂ ಅಧಿಕ ವರ್ತಕರ ಮಳಿಗೆಗಳಿವೆ. ಈಗ ಮಾರುಕಟ್ಟೆ ಶೇಂಗಾ, ತೊಗರಿ, ಜೋಳದಂಥ ಬೆಳೆಗಳು ಆವಕವಾಗುತ್ತಿವೆ. ಸಾಕಷ್ಟು ರೈತರು ದೂರದೂರುಗಳಿಂದ ಬಂದು ತಮ್ಮ ಧಾನ್ಯ ಮಾರಾಟ ಮಾಡುತ್ತಿದ್ದಾರೆ. ಆದರೆ, ಈಗ ಒಂದು ವಾರಗಳ ಕಾಲ ಎಪಿಎಂಸಿ ಸ್ಥಗಿತಗೊಂಡಿರುವುದು ರೈತರಿಗೆ ಮಾತ್ರ ನುಂಗಲಾರದ ತುತ್ತಾಗಿದೆ.