ರಾಯಚೂರು: ಜಿಲ್ಲೆಯಲ್ಲಿ ಹಾದು ಹೋಗಿರುವ ಎಲ್ಲ ಮುಖ್ಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನವೆಂಬರ್ ಒಳಗಾಗಿ ಮುಚ್ಚದಿದ್ದಲ್ಲಿ ಅಧಿಕಾರಿಗಳ ಕೈಗೆ ಅಮಾನತು ಆದೇಶ ನೀಡುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರವಾಹದ ಹಿನ್ನೆಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಪ್ರತಿಯೊಂದು ವಿಚಾರದಲ್ಲೂ ಹಿಂದುಳಿದಿದ್ದೀರಿ. ಸರ್ಕಾರದ ವೇಗಕ್ಕೆ ಒಗ್ಗಿಕೊಳ್ಳಬೇಕು. ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ನಗರದೊಳಗೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯ ಬಾಕಿ ಕಾಮಗಾರಿಯನ್ನು ಅ.1ರೊಳಗೆ ಮುಗಿಸಬೇಕು. ಇಲ್ಲದಿದ್ದರೆ ಮರುದಿನವೇ ನಿಮ್ಮ ಕೈಗೆ ಅಮಾನತು ಆದೇಶ ಸಿಗಲಿದೆ ಎಂದು ಎಚ್ಚರಿಸಿದರು.
ಪ್ರವಾಹದಿಂದ ಸಾಕಷ್ಟು ರಸ್ತೆಗಳು, ಸೇತುವೆ ಸೇರಿದಂತೆ ಮೂಲ ಸೌಲಭ್ಯಗಳು ಹಾಳಾಗಿವೆ. ಎಷ್ಟು ಹಾನಿಯಾಗಿದೆ ಎಂದು ಕೂಡಲೇ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು. ಪರವಾನಗಿ ಇಲ್ಲದೇ ರಸ್ತೆ ಅಗೆಯುವುದು, ರಸ್ತೆ ಬದಿ ಬಿತ್ತನೆ ಮಾಡುವಂತಹ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ಅದನ್ನು ಕೂಡಲೇ ತಡೆಗಟ್ಟಿ ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ 500 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ ರಾಯಚೂರು ಜಿಲ್ಲೆಗೂ ಅನುದಾನ ಒದಗಿಸಲಾಗಿದೆ. ಆದರೆ, ಅನುದಾನ ಬಂದಿಲ್ಲ ಎಂದು ಪಿಡಬ್ಲು ್ಯಡಿ ಇಂಜಿನಿಯರ್ ದೂರಿದರು. ಆ ಕ್ಷಣಕ್ಕೆ ಇ ಮೇಲ್ ಪರಿಶೀಲಿಸಿದ ಅಧಿಕಾರಿ ಹಣ ಬಂದಿದೆ ಸರ್, ಗಮನಿಸಿರಲಿಲ್ಲ ಎಂದು ಸಮಜಾಯಿಷಿ ನೀಡಿದರು. ನಿಮ್ಮಂಥ ಅಧಿಕಾರಿಗಳಿದ್ದರೆ ಏನು ಮಾಡಬೇಕು ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಬ್ಯಾರೇಜ್ ನಿರ್ವಹಣೆಗಿಲ್ಲ ಹಣ: ದೇವದುರ್ಗ ತಾಲೂಕಿನ ಗೂಗಲ್ ಬ್ಯಾರೇಜ್ ಕಳೆದ 10 ವರ್ಷದಿಂದ ನಿರ್ವಹಣೆ ಆಗಿಲ್ಲ. ಅದಕ್ಕೆ ಹಣವೇ ಬಂದಿಲ್ಲ ಎಂದು ಇಂಜಿನಿಯರ್‌ಗಳು ಹೇಳುತ್ತಾರೆ ಎಂದು ಎಂಎಲ್ಸಿ ಬಸವರಾಜ ಪಾಟೀಲ ಇಟಗಿ ದೂರಿದರು. ಅದಕ್ಕೆ ಪ್ರತ್ಯೇಕ ಹಣ ಇರಬೇಕಲ್ಲ ಎಂದು ಸಚಿವರು ಕೇಳಿದರೆ ಇದು, ಬ್ರಿಡ್ಜ್ ಕಂ ಬ್ಯಾರೇಜ್ ಆಗಿರುವ ಕಾರಣ ಹಣ ನೀಡುತ್ತಿಲ್ಲ ಎಂದು ಹೇಳಿದರು. ಕೂಡಲೇ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್‌ಗೆ ಕರೆ ಮಾಡಿದ ಸಚಿವರು, ಗೂಗಲ್ ಬ್ಯಾರೇಜ್ ನಿರ್ವಹಣೆಯ ಅಂದಾಜು ಪಟ್ಟಿ ತರಿಸಿಕೊಂಡು ಅನುದಾನ ಒದಗಿಸುವಂತೆ ಸೂಚಿಸಿದರು.