ರಾಯಚೂರು: ಜಿಲ್ಲೆಯಲ್ಲಿ ರವಿವಾರ ರಾತ್ರಿಯಿಂದ ಭಾರೀ ಮಳೆ ಸುರಿದ ಪರಿಣಾಮ ವಿದ್ಯುತ್ ಅಡಚಣೆ ಉಂಟಾಗಿದ್ದು, ಟಾರ್ಚ್ ಬೆಳಕಲ್ಲಿ ಮತದಾನ ಮಾಡುತ್ತಿರುವ ಪ್ರಸಂಗ ನಡೆದಿದೆ.
ನಗರದ ಎಪಿಎಂಸಿ ಕಚೇರಿಯಲ್ಲಿ ಈಶಾನ್ಯ ಪದವೀಧರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿದ್ದು, ಬೆಳಕಿನ ವ್ಯವಸ್ಥೆ ಇಲ್ಲದಾಗಿದೆ. ನಿನ್ನೆ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ವಿದ್ಯುತ್ ಅಡಚಣೆ ಉಂಟಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಮಾಡಲು ಬಂದಂತಹ ಮತದಾರರು ಟಾರ್ಚ್ ಬೆಳಕಿನಲ್ಲಿ ಮತದಾನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಧಿಕಾರಿಗಳು ಟಾರ್ಚ್ ಬೆಳಕು ಹಾಕಿ ಮತದಾರರಿಗೆ ಬೆಳಕು ಹಾಕುತ್ತಿರುವ ದೃಶ್ಯಾವಳಿಗಳು ಕಂಡು ಬಂದಿವೆ.
ವಿಜಯೇಂದ್ರ ಮತದಾನ:
ಶಿಕಾರಿಪುರ: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಮತದಾನ ಹಿನ್ನೆಲೆ ಪಟ್ಟಣ ತಾಲ್ಲೂಕು ಕಚೇರಿಯಲ್ಲಿರುವ ಮತಗಟ್ಟೆ ಕೇಂದ್ರದಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ವಿಜಯೇಂದ್ರ ಪತ್ನಿ ಪ್ರೇಮಾ ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಬೋಜೆಗೌಡರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.