ರಾಯಚೂರು: ಇಲ್ಲಿನ ಜಿಲ್ಲಾ ಡಿಎಆರ್ ಪೊಲೀಸ್ ಮೈದಾನದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳ ಪರೇಡ್ ನಡೆಸಲಾಯಿತು.
ಜಿಲ್ಲೆಯಲ್ಲಿ 1,160 ರೌಡಿಶೀಟರ್‌ಗಳಿದ್ದು, ಸುಮಾರು 300ಕ್ಕೂ ಅಧಿಕ ರೌಡಿಶೀಟರ್‌ಗಳನ್ನು ಕರೆ ತರಲಾಗಿತ್ತು. ಅದರಲ್ಲಿ ಕೊಲೆಗೆ ಯತ್ನಿಸಿದವರು, ಮಟ್ಕಾ, ಬೆಟ್ಟಿಂಗ್ ಬುಕ್ಕಿಗಳು, ಕಳ್ಳತನ ಆರೋಪಿಗಳು ಸೇರಿ ಇತರರು ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಎಲ್ಲ ರೌಡಿಗಳನ್ನು ವಿಚಾರಿಸಿದರು.
ಬಳಿಕ ಮಾತನಾಡಿದ ಡಾ| ವೇದಮೂರ್ತಿ, ರೌಡಿಶೀಟರ್‌ಗಳು ಎಂದು ಗುರುತಿಸಿಕೊಂಡ ಮಾತ್ರಕ್ಕೆ ಅದೇ ಹಾದಿಯಲ್ಲಿ ಉಳಿಯುವುದು ಸರಿಯಲ್ಲ. ಉತ್ತಮ ನಡತೆ ಮೂಲಕ ಸುಧಾರಣೆ ಕಂಡುಕೊಳ್ಳಬೇಕು. ಇನ್ನು ಮುಂದೆ ಎಲ್ಲ ಅಕ್ರಮ ಚಟುವಟಿಕೆಗಳನ್ನು ಕೈಬಿಡಬೇಕು. ನೀವು ಮಾಡುವ ಕೆಟ್ಟ ಕೆಲಸಗಳಿಂದ ನಿಮ್ಮ ಕುಟುಂಬ ಮಾತ್ರವಲ್ಲದೇ ಎಷ್ಟೋ ಅಮಾಯಕ ಕುಟುಂಬಗಳು ಬಲಿಯಾಗಬೇಕಾಗುತ್ತದೆ. ಇನ್ನು ಮುಂದೆ ಸುಧಾರಣೆ ಕಂಡುಕೊಳ್ಳದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸುಮಾರು 400ಕ್ಕೂ ಅಧಿಕ ರೌಡಿಶೀಟರ್‌ಗಳನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ. ಲಿಂಗಸುಗೂರು ಭಾಗದಲ್ಲಿ ಮಟ್ಕಾ ಪ್ರಕರಣಗಳು ಹೆಚ್ಚಾಗಿವೆ. ಅಟ್ರಾಸಿಟಿ, ಕೋಮುಗಲಭೆ, ಗುಂಪು ಘರ್ಷಣೆ, ಕೊಲೆ ಯತ್ನ ಸೇರಿ ಅನೇಕ ಪ್ರಕರಣಗಳಲ್ಲಿ ಭಾಗಿಯಾದವರು ಬಂದಿದ್ದಾರೆ. ಅವರಿಗೆಲ್ಲ ಎಚ್ಚರಿಕೆ ನೀಡಲಾಗಿದೆ ಎಂದು ಎಹೇಳಿದರು.
ಫೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಆರೋಪಿಗಳನ್ನೂ ರೌಡಿಶೀಟರ್ ಪಟ್ಟಿಗೆ ಸೇರಿಸುವಂತೆ ತಾಕೀತು ಮಾಡಲಾಗಿದೆ. ಮುಖ್ಯವಾಗಿ ನಡವಳಿಕೆ ಸುಧಾರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಇಂಥ ಆರೋಪಿಗಳು ಯುವಕರ ಮನಸ್ಥಿತಿ ಕೂಡ ಕೆಡಿಸುತ್ತಾರೆ. ಅದನ್ನು ಅಕ್ರಮ ಚುಟವಟಿಕೆಗಳನ್ನು ಶೋಕಿ ರೀತಿಯಲ್ಲಿ ಮಾಡುತ್ತಾರೆ. ಅದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಇನ್ನು ಅನೇಕ ವರ್ಷಗಳಿಂದ ಸಣ್ಣಪುಟ್ಟ ಪ್ರಕರಣಗಳಲ್ಲಿ ಸಿಲುಕಿದ ಅನೇಕರು ಸನ್ನಡತೆಯಿಂದ ಬಾಳುತ್ತಿದ್ದು, ಅವರ ನಡತೆ ಪರಿಶೀಲಿಸಿ ಅವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲು ಶಿಫಾರಸು ಮಾಡುವುದಾಗಿ ತಿಳಿಸಿದರು.
ಪ್ರಭಾವಿಗಳೇ ಗೈರು: ಪರೇಡ್‌ಗೆ ಸಣ್ಣಪುಟ್ಟ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರೇ ಹೆಚ್ಚಾಗಿ ಬಂದಿದ್ದರು. ಆದರೆ, ದೊಡ್ಡ ಪ್ರಕರಣಗಳಲ್ಲಿ ರೌಡಿಶೀಟರ್‌ಗಳ ಸಾಲಿಗೆ ಸೇರಿ ಜಾಮೀನು ಮೇಲೆ ಓಡಾಡುತ್ತಿರುವವರು ಬಂದಿರಲಿಲ್ಲ. ಆದರೆ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇನ್ನೂ ಯಾರು ಯಾರು ಬಂದಿಲ್ಲವೋ ಪರಿಶೀಲಿಸಿ ಅವರಿಗೂ ಎಚ್ಚರಿಕೆ ನೀಡುವುದಾಗಿ ಎಸ್‌ಪಿ ತಿಳಿಸಿದರು.