ರಾಯಚೂರು: ಜಿಲ್ಲೆಯಲ್ಲಿ ಕೈಗೊಂಡಿರುವ ಕುಡಿವ ನೀರಿನ ಕಾಮಗಾರಿಗಳನ್ನು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಮುಗಿಸುವ ಮೂಲಕ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ನೂತನ ಸಿಇಒ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.
ಅಧಿಕಾರ ವಹಿಸಿಕೊಂಡ ಮರುದಿನವೇ ನಗರದ ಜಿಪಂ ಕಚೇರಿ ಆವರಣದಲ್ಲಿರುವ ಶುಕ್ರವಾರ ಜಲನಿರ್ಮಲ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಮಾಹಿತಿ ಇದೆ. ಬರದಿಂದ ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿಗಾಗಿ ಪರಿತಪಿಸುವ ಸನ್ನಿವೇಶ ಇದೆ. ಈ ನಿಟ್ಟಿನಲ್ಲಿ ಸಮರ್ಪಕ ನೀರೊದಗಿಸುವ ಜವಾಬ್ದಾರಿ ಇಲಾಖೆಗಳ ಮೇಲಿದೆ. ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ಶ್ರೀರ್ಘದಲ್ಲೇ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವು ಯೋಜನೆಗಳಡಿ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕು. ಗ್ರಾಮೀಣ ಭಾಗವೇ ಹೆಚ್ಚು ಸಮಸ್ಯೆಗೆ ತುತ್ತಾಗುತ್ತಿದೆ. ಅಂಥ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದು ಹೋಗಿ ಸಮಸ್ಯೆ ಅರಿತು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ನೀರಿನ ತೊಂದರೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಕೆಲಸ ಮಾಡುವಂತೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸಂಖ್ಯೆ ಎಷ್ಟು, ಅದರಲ್ಲಿ ಎಷ್ಟು ಚಾಲ್ತಿಯಲ್ಲಿವೆ. ಯಾವ ಘಟಕಕ್ಕೆ ಏನು ಸಮಸ್ಯೆಯಾಗಿದೆ? ಆರಂಭಿಸಲು ಎದುರಾಗಿರುವ ಸಮಸ್ಯೆಗಳ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ ಮಹ್ಮದ್ ಯೂಸೂಫ್, ಯೋಜನಾಧಿಕಾರಿ ಡಾ| ಟಿ. ರೋಣಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗ ಇದ್ದರು