ಮಸ್ಕಿ : ಚಿನ್ನದ ವಸ್ತುಗಳನ್ನು ಪಾಲಿಷ್ ಮಾಡಿ ಕೊಡುವುದಾಗಿ ನಂಬಿಸಿದ ಯುವಕರ ತಂಡವೊಂದು ಹಾಡು ಹಗಲೇ ಚಿನ್ನದ ಆಭರಣಗಳೊಂದಿಗೆ ಪರಾರಿಯಾದ ಘಟನೆ ಪಟ್ಟಣದಲ್ಲಿ ಇಂದು (ಗುರುವಾರ, ಜುಲೈ 29) ಬೆಳಕಿಗೆ ಬಂದಿದೆ.
ಪಟ್ಟಣದ ಬಳಗಾನೂರು ರಸ್ತೆ ಸಮೀಪದಲ್ಲಿ ಇರುವ ನಿವೃತ್ತ ಶಿಕ್ಷಕ ಯಲ್ಲಪ್ಲ ಜಾಲಿಹಾಳ ನಿವಾಸಕ್ಕೆ ಬೆಳಿಗ್ಗೆ ಬೈಕ್ ಮೇಲೆ ಆಗಮಿಸಿದ ಇಬ್ಬರು ಯುವಕರು ತಾವು ಚಿನ್ನದ ಅಭರಣಗಳನ್ನು ಪಾಲಿಷ್ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದಾರೆ, ಅಡಿಗೆ ಮಾಡುವ ಕುಕ್ಕರನಲ್ಲಿ ಚಿನ್ನ ಹಾಕಿ ಕೊಡಿ ಎಂದು ವಂಚಕರು ಹೇಳಿದಾಗ ಕುಟುಂಬದ ಸದಸ್ಯರು ಕುಕ್ಕರನಲ್ಲಿ 10 ತೊಲೆಯ ಚಿನ್ನದ ಆಭರಣಗಳನ್ನು ಹಾಕಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?
ಕುಕ್ಕರ್ ಕಾಯಿಸುವ ವೇಳೆ ಕುಟುಂಬದ ಸದಸ್ಯರಿಗೆ ಯಾಮಾರಿಸಿದ ವಂಚಕರ ತಂಡ 5 ಲಕ್ಷ ರೂ ಬೆಲೆ ಬಾಳುವ 10 ತೊಲೆ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ. ಇದರಿಂದ ಗಾಭರಿಗೊಂಡ ಯಲ್ಲಪ್ಪ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ ಸ್ಪೆಕ್ಟರ್ ಭೀಮದಾಸ್ ತನಿಖೆ ಕೈಗೊಂಡಿದ್ದಾರೆ.
ಹಾಡು ಹಗಲೇ ಪಟ್ಟಣದಲ್ಲಿ ಮನೆಗಳಿಗೆ ಹೋಗಿ, ವಂಚಿಸಿ ಚಿನ್ನದ ಆಭರಣಗಳನ್ನು ಕಳವು ಮಾಡುತ್ತಿದ್ದರಿಂದ ಸಾರ್ವಜನಿಕರಲ್ಲಿ ಅತಂಕ ಸೃಷ್ಟಿಯಾಗಿದೆ. ಪೊಲೀಸ್ ಇಲಾಖೆ ವಂಚಕರ ಜಾಲ ಬಯಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸುಪ್ರೀಂ ತೀರ್ಪು ಬಂದ ಕೂಡಲೇ ಕೃಷ್ಣ ಮೇಲ್ದಂಡೆ ಕಾಮಗಾರಿಗೆ ಚಾಲನೆ: ಸಿಎಂ ಬೊಮ್ಮಾಯಿ