Advertisement

ಮಸ್ಕಿ ಹೆಸರಿಗಷ್ಟೇ ಹೊಸ ತಾಲೂಕು!

06:02 PM Sep 28, 2019 | Naveen |

ಉಮೇಶ್ವರಯ್ಯ ಬಿದನೂರಮಠ
ರಾಯಚೂರು (ಮಸ್ಕಿ): ಕಳೆದೆರಡು ವರ್ಷಗಳ ಹಿಂದೆ ಕಾಂಗ್ರೆಸ್‌ ಸರ್ಕಾರ ನೂತನ ಮಸ್ಕಿ ತಾಲೂಕು ಘೋಷಿಸಿತ್ತು. ಆದರೆ ಸರ್ಕಾರ ನೂತನ ತಾಲೂಕಿಗೆ ಅಗತ್ಯ ಅನುದಾನ ನೀಡದ್ದರಿಂದ ನಾನಾ ಸಂಕಷ್ಟಗಳ ಮಧ್ಯೆ ಅಲ್ಲಿ ಆಡಳಿತ ನಡೆಯುತ್ತಿದೆ.

Advertisement

2017ರ ಜುಲೈನಲ್ಲಿ ತಾಲೂಕು ಘೋಷಣೆಯಾಗಿದ್ದು, 2018ರ ಜನವರಿಯಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ತರಲಾಯಿತು. ಆದರೆ, ತಹಶೀಲ್ದಾರ್‌ ಒಬ್ಬರನ್ನು ಬಿಟ್ಟರೆ ಮತ್ಯಾವುದೇ ಇಲಾಖೆಗಳಿಗೆ ಕಾಯಂ ಅಧಿಕಾರಿಗಳಿಲ್ಲ. ಆಡಳಿತಾತ್ಮಕವಾಗಿ ಈ ಹಿಂದೆ ಹೇಗೆ ಜನ ದೂರದ ತಾಲೂಕಿಗೆ ಹೋಗಬೇಕಿತ್ತೋ ಈಗಲೂ ಅದೇ ಸನ್ನಿವೇಶ ಮುಂದುವರಿದಿದೆ.

ಇದರಿಂದ ಹೊಸ ತಾಲೂಕು ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ಜನರದ್ದು. ಹೆಸರಿಗಷ್ಟೇ ಹೊಸ ತಾಲೂಕು: ಮಸ್ಕಿ ತಾಲೂಕು ಘೋಷಣೆಗೆ ಸಿಮೀತವಾಗಿದ್ದು, ಸಣ್ಣ-ಪುಟ್ಟ ದಾಖಲೆಯಿಂದ ಹಿಡಿದು ಯಾವುದೇ ಕೆಲಸಕ್ಕೂ ಹಳೇ ತಾಲೂಕು ಕೇಂದ್ರಕ್ಕೆ ಅಲೆಯುವ ಸ್ಥಿತಿ ಇಂದಿಗೂ ಮುಂದುವರಿದಿದೆ. 30 ತಾಂಡಾಗಳು, ಗೊಲ್ಲರಹಟ್ಟಿ ಕ್ಯಾಂಪ್‌ಗ್ಳು, 20 ಗ್ರಾಪಂ, 8 ಹೋಬಳಿ ಸೇರಿ ಒಟ್ಟು 143 ಹಳ್ಳಿಗಳನ್ನು ಒಳಗೊಂಡು ಮಸ್ಕಿ ತಾಲೂಕು ರಚಿಸಲಾಯಿತು. ಇದರಿಂದ ಸಿಂಧನೂರು, ಲಿಂಗಸುಗೂರು, ಮಾನ್ವಿ ಮೂರು ತಾಲೂಕಿನಲ್ಲೂ ಹಂಚಿಕೆಯಾಗಿದ್ದ ಗ್ರಾಮಗಳು ಮಸ್ಕಿ ತಾಲೂಕಿಗೆ ಒಳಪಟ್ಟವು.

ಅಷ್ಟು ವರ್ಷಗಳ ಕಾಲ ದೂರ ಅಲೆಯುತ್ತಿದ್ದ ಜನರಿಗೆ ಕೊನೆಗೂ ತಾಪತ್ರಯ ತಪ್ಪಿತಲ್ಲ ಎಂದು ಸಂಭ್ರಮಿಸಿದರು. ಆದರೆ, ಆ ಖುಷಿ ಇಂದಿಗೂ ಈಡೇರಿಲ್ಲ. ಈಗ ಅಲ್ಲಿ ಸದ್ಯ ತಹಶೀಲ್ದಾರ್‌ ಕಚೇರಿ ಮಾತ್ರ ತೆರೆದಿದ್ದು, ತಹಶೀಲ್ದಾರ್‌ರನ್ನು ನೇಮಿಸಲಾಗಿದೆ. ಆದರೆ, ಬೇರೆ ಯಾವುದೇ ಇಲಾಖೆಗಳು ಆರಂಭಗೊಂಡಿಲ್ಲ. ಅಗತ್ಯ ಸಿಬ್ಬಂದಿಯನ್ನೇ ನೀಡಿಲ್ಲ. ಹೀಗಾಗಿ ನಾಡ ಕಚೇರಿಯಂತೆಯೇ ತಹಶೀಲ್‌ ಕಚೇರಿಯೂ ಕೆಲಸ ಮಾಡುತ್ತಿದೆ.

ಜಾತಿ-ಆದಾಯ, ಪಹಣಿ ಸೇರಿ ಇತರೆ ಸಣ್ಣಪುಟ್ಟ ಕೆಲಸಗಳು ಹೊರತುಪಡಿಸಿ ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಇನ್ನೂ ಆಗುತ್ತಿಲ್ಲ. ಸರ್ವೇ, ಪಹಣಿ ತಿದ್ದುಪಡಿ, ಮ್ಯುಟೇಶನ್‌ ಸೇರಿ ಇತರೆ ಕೆಲಸಕ್ಕೆ ಇನ್ನೂ ಹಳೆಯ ತಾಲೂಕುಗಳಿಗೆ ತೆರಳಬೇಕಿರುವುದು ವಿಪರ್ಯಾಸ.

Advertisement

ಇದು ಕಂದಾಯ ಇಲಾಖೆ ಕಥೆಯಾದರೆ ತಾಪಂ, ಕೃಷಿ, ಶಿಕ್ಷಣ ಸೇರಿದಂತೆ ಉಳಿದ 28 ಇಲಾಖೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಾನ್ವಿ ತಾಲೂಕಿನಲ್ಲಿದ್ದ ಪಾಮನಕಲ್ಲೂರು, ಹಾಲಾಪುರ ಹೋಬಳಿಯ ಹಳ್ಳಿಗರು ಸಣ್ಣ-ಪುಟ್ಟ ಕೆಲಸಕ್ಕೂ ಮಾನ್ವಿಗೇ ಹೋಗಬೇಕು. ಮಸ್ಕಿ ಹೋಬಳಿ ವ್ಯಾಪ್ತಿಯ ಜನ ಲಿಂಗಸುಗೂರಿಗೆ, ಬಳಗಾನೂರು, ಗುಡದೂರು ಹೋಬಳಿ ವ್ಯಾಪ್ತಿಯ ಹಳ್ಳಿಗರು ಸಿಂಧನೂರಿಗೆ ಓಡಾಡಬೇಕಿದೆ. ಇದರಿಂದ ಹೊಸ ತಾಲೂಕು ಇದ್ದೂ ಇಲ್ಲದ ಪರಿಸ್ಥಿತಿಯಾಗಿದೆ. ಇನ್ನು ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸೇರಿ ಇತರೆ ಇಲಾಖೆಗೆ ಪ್ರತ್ಯೇಕ ಕಚೇರಿ ತೆಗೆದಿದ್ದರೂ ಸಿಬ್ಬಂದಿ ನೇಮಿಸಿಲ್ಲ.

ಬರೀ ಗೊಂದಲ: ಸಾರ್ವಜನಿಕರು ಮಾತ್ರವಲ್ಲ, ಸರ್ಕಾರಿ ಇಲಾಖೆ ನೌಕರರಿಗೂ ಇದು ಗೊಂದಲವಾಗಿದೆ. ಹೊಸ ತಾಲೂಕು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರೂ ಸಂಬಳ ಮಾತ್ರ ತಾಲೂಕಿನ ಖಜಾನೆಯಲ್ಲಿ ಆಗುತ್ತಿದೆ. ಹೊಸ ತಾಲೂಕು ಮಸ್ಕಿ ವ್ಯಾಪ್ತಿಯ ಅಂಕಿ-ಸಂಖ್ಯೆಯನ್ನೇ ಇನ್ನೂ ಪ್ರತ್ಯೇಕವಾಗಿ ತಯಾರಿಸಿಲ್ಲ. ತಾಲೂಕು ವ್ಯಾಪ್ತಿಯ ಒಟ್ಟು ಬಿತ್ತನೆ ಕ್ಷೇತ್ರ ಎಷ್ಟು? ಎನ್ನುವ ಮಾಹಿತಿಯೇ ಕೃಷಿ ಇಲಾಖೆ ಬಳಿಯೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next