Advertisement

ರಾಯಚೂರು: ಬರದ ನಾಡಲ್ಲಿ ನರೇಗಾ ಹೆಗ್ಗುರುತು

05:52 PM Aug 03, 2021 | Team Udayavani |

ರಾಯಚೂರು: ನರೇಗಾ ಎನ್ನುವ ಶಬ್ಧ ಈಗ ಹಳ್ಳಿಗಳಲ್ಲಿ ಮನೆ ಮಾತಾಗಿದೆ. ಹಿಂದೆ ಬೇಸಿಗೆ ಬಂದರೆ ಸಾಕು ಕೆಲಸವಿಲ್ಲದೇ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗುತ್ತಿದ್ದ ಜನ; ಈಗ ಮಾತ್ರ ನರೇಗಾ “ಐತಲ್ಲ ಮತ್ಯಾಕೆ ಗುಳೆ’ ಎನ್ನುತ್ತಿದ್ದಾರೆ. ಮಾನವ ದಿನಗಳ ಸೃಜನೆಯಲ್ಲಿ ಅಗ್ರಗಣ್ಯ ಸಾಲಿನಲ್ಲಿರುವ ರಾಯಚೂರು ಜಿಲ್ಲಾ ಪಂಚಾಯಿತಿ ನರೇಗಾ ಮೂಲಕ ಹೆಗ್ಗುರುತು ಮೂಡಿಸುತ್ತಲೇ ಮುನ್ನುಗ್ಗುತ್ತಿರುವುದು ಗಮನಾರ್ಹ.

Advertisement

ಕಳೆದ ಸಾಲಿನಲ್ಲಿ ಇಡೀ ರಾಜ್ಯದಲ್ಲಿಯೇ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಕೀರ್ತಿ ರಾಯಚೂರಿಗೆ ಲಭಿಸಿತ್ತು. ಈ ಬಾರಿ ತುಸು ಹಿನ್ನಡೆಯಾಗಿದ್ದು, ಕೂದಲೆಳೆ ಅಂತರದಲ್ಲಿ 2ನೇ ಸ್ಥಾನದಲ್ಲಿದೆ. ಕೂಲಿ ನೀಡುವುದಷ್ಟೇ ಅಲ್ಲ ಜಿಲ್ಲೆಯಲ್ಲಿ ಕೈಗೊಂಡ ಅನೇಕ ಕಾಮಗಾರಿಗಳು ಇಡೀ ರಾಜ್ಯದ ಗಮನ ಸೆಳೆಯುತ್ತಿವೆ. ರಸ್ತೆ ಬದಿ ಗುಂಡಿ ತೆಗೆಯುವುದರಿಂದ ಹಿಡಿದು ದೊಡ್ಡ ದೊಡ್ಡ ಗೋದಾಮುಗಳನ್ನು ನಿರ್ಮಿಸುವ ಮಟ್ಟಿಗೆ ನರೇಗಾ ಬಳಕೆಯಾಗುತ್ತಿರುವುದು ವಿಶೇಷ.

ಜಿಲ್ಲೆಯ ಯಾವ ಮೂಲೆಗೆ ಹೋದರೂ ಅಲ್ಲಿ ನರೇಗಾದ ಕೆಲಸ ಕಾಣಿಸುವ ಮಟ್ಟಿಗೆ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಸೌಲಭ್ಯಗಳಿಂದ ದೂರ ಉಳಿಯುತ್ತಿರುವ ತಾಂಡಾಗಳಿಗೂ ಯೋಜನೆ ತಲುಪಿಸುವ ಉದ್ದೇಶದಿಂದ 19 ತಾಂಡಾಗಳಲ್ಲಿ ರೋಜಗಾರ್‌ ಮಿತ್ರರನ್ನು ಆಯ್ಕೆ ಮಾಡಲಾಗಿದೆ. 20 ಸಾವಿರಕ್ಕಿಂತ ಹೆಚ್ಚು ಮಾನವ ದಿನಗಳ ಸೃಜಿಸಿರುವ ಗ್ರಾಮಗಳಿಗೆ ಒಬ್ಬ ಮಹಿಳೆಯನ್ನು ಕಾಯಕ ಮಿತ್ರರನ್ನಾಗಿ ನೇಮಿಸಲಾಗಿದೆ. ಆ ಮೂಲಕ ಎಷ್ಟು ಸಾಧ್ಯವೋ ಅಷ್ಟು ಅತ್ಯುತ್ತಮ ರೀತಿಯಲ್ಲಿ ನರೇಗಾ ಅನುಷ್ಠಾನಕ್ಕೆ ಒತ್ತು ನೀಡುತ್ತಿದ್ದಾರೆ ಅಧಿಕಾರಿಗಳು.

ಕಳೆದ ವರ್ಷದ ಗುರಿ ಸಾಧನೆ 2021ನೇ ಸಾಲಿನಲ್ಲಿ ನರೇಗಾದಡಿ ಸಾಕಷ್ಟು ಕಾಮಗಾರಿ ನಿರ್ವಹಿಸಲಾಗಿದೆ. ಜಿಲ್ಲೆಯಲ್ಲಿ 592 ಅಡುಗೆ ಕೋಣೆ ನಿರ್ಮಾಣ ಗುರಿಯಿದ್ದು, 465 ಪೂರ್ಣಗೊಂಡಿವೆ. 122 ಪ್ರಗತಿಯಲ್ಲಿವೆ. 161 ಗೋಕಟ್ಟೆಗಳ ನಿರ್ಮಾಣ ಗುರಿಯಿದ್ದು, 101 ಪೂರ್ಣಗೊಂಡಿವೆ. 54 ಪ್ರಗತಿಯಲ್ಲಿವೆ. 564 ಮಳೆ
ನೀರು ಕೊಯ್ಲು ಕಾಮಗಾರಿಯಲ್ಲಿ 490 ಮುಗಿದಿವೆ. 365 ಶಾಲಾ ಕಾಂಪೌಂಡ್‌ಗಳಲ್ಲಿ 333 ಪೂರ್ಣಗೊಂಡಿದ್ದು, 20 ಪ್ರಗತಿಯಲ್ಲಿವೆ. ಅಂಗನವಾಡಿ ಕಟ್ಟಡಗಳಲ್ಲಿ 206 ಗುರಿಯಿದ್ದು, 103 ಪೂರ್ಣಗೊಂಡಿವೆ. 98 ಪ್ರಗತಿಯಲ್ಲಿವೆ. 47 ಗ್ರಾಪಂ ಕಟ್ಟಡಗಳಲ್ಲಿ ಒಂದು ಲೋಕಾರ್ಪಣೆಗೊಂಡಿದ್ದು, 30 ಪ್ರಗತಿಯಲ್ಲಿವೆ.

ಜಿಲ್ಲೆಯಲ್ಲಿ 27 ಗೋದಾಮುಗಳ ನಿರ್ಮಾಣ ಗುರಿ ಹೊಂದಿದ್ದು, 16 ಪೂರ್ಣಗೊಂಡಿವೆ. 11 ಪ್ರಗತಿಯಲ್ಲಿವೆ. 50 ಕಲ್ಯಾಣಿಗಳಲ್ಲಿ 37 ಪೂರ್ಣಗೊಂಡಿವೆ. 8ಸಂತೆ ಕಟ್ಟೆಗಳಲ್ಲಿ 4 ಪೂರ್ಣಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿ 27 ಬಾಸ್ಕೆಟ್‌ ಬಾಲ್‌ ಕ್ರೀಡಾಂಗಣಗಳಲ್ಲಿ 15 ಪೂರ್ಣಗೊಂಡಿವೆ. 10 ಪ್ರಗತಿಯಲ್ಲಿವೆ.

Advertisement

ಏನೆಲ್ಲ ಕಾಮಗಾರಿಗಳು?
ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 3745 ಕೃಷಿ ಹೊಂಡ, 14,454 ಬದು ನಿರ್ಮಾಣ, 431 ತೆರೆದ ಬಾವಿ, 20,184 ಸೋಕ್‌ ಪಿಟ್‌, 168 ಬೋರ್‌ವೆಲ್‌ ರಿಚಾರ್ಜ್‌ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಜತೆಗೆ 40 ತೋಟಗಾರಿಕೆ, 25 ರೇಷ್ಮೆ, 6413 ದನದ ಶೆಡ್‌, 295 ಕುರಿ ಶೆಡ್‌, 10 ಕೋಳಿ ಶೆಡ್‌, 12 ಹಂದಿ ಶೆಡ್‌ 6 ಈರುಳ್ಳಿ ಶೆಡ್‌ ಸೇರಿದಂತೆ ಒಟ್ಟು 45,783 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು 113 ಕಿ.ಮೀ. ಉದ್ದದ ರಸ್ತೆಗಳುದ್ದಕ್ಕೂ ನೆಡುತೋಪು ನಿರ್ಮಾಣ, 19 ರೈತರ ಜಮೀನುಗಳಲ್ಲಿ ಅರಣ್ಯೀಕರಣ, 93 ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು, 29 ಗ್ರಾಮೀಣ ಉದ್ಯಾನವನ, ಅರಣ್ಯ ಪ್ರದೇಶಗಳಲ್ಲಿ 43 ಕಂದಕ ನಿರ್ಮಾಣ, 18 ಇತರೆ ಕಾಮಗಾರಿ ಸೇರಿ ಒಟ್ಟು 5067 ಕಾಮಗಾರಿ ಜಾರಿ ಮಾಡುವ ಮೂಲಕ ಹಸಿರೀಕರಣಕ್ಕೂ ಒತ್ತು ನೀಡಲಾಗುತ್ತಿದೆ. 365 ಶಾಲಾ ಕಾಂಪೌಂಡ್‌ ನಿರ್ಮಾಣ, 27 ಬಾಸ್ಕೇಟ್‌ ಬಾಲ್‌ ಕೋರ್ಟ್‌, 314 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, 592 ಅಡುಗೆ ಕೋಣೆ, 161 ಬೋಜನಾಲಯ, ಪೌಷ್ಟಿಕ ತೋಟ 396 ಶಾಲೆಗಳಲ್ಲಿ ಮಕ್ಕಳಿಗೆ ಆಟೋಟಕ್ಕೆ ಅನುಕೂಲವಾಗುವಂತೆ 245 ಆಟದ ಮೈದಾನ ನಿರ್ಮಾಣ ಸೇರಿ ಒಟ್ಟು 2100 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.

ಗ್ರಾಪಂ ಮೂಲ ಸೌಲಭ್ಯಕ್ಕೂ ಒತ್ತು
ಹಳ್ಳಿಗಳನ್ನು ಸ್ವತ್ಛ ಸುಂದರಗೊಳಿಸುವ ಉದ್ದೇಶದಿಂದ ನರೇಗಾದಡಿ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ. 179 ಗ್ರಾಪಂಗಳಲ್ಲಿ ರಾಜೀವ್‌ ಗಾಂಧಿ  ಸೇವಾ ಕೇಂದ್ರ, 14 ಗೋದಾಮು ನಿರ್ಮಾಣ, 39 ಹೊಸ ಗ್ರಾಪಂ ಕಟ್ಟಡ, 47 ಮಳೆ ನೀರು ಕೋಯ್ಲು, 101 ಅಂಗನವಾಡಿ ಕೇಂದ್ರ, 206 ಸಂಜೀವಿನಿ ಶೆಡ್‌, 14 ಹಳ್ಳಿ ಸಂತೆ ಕಟ್ಟೆ, 9 ರಸ್ತೆ ಕಾಮಗಾರಿ, 1008 ಚರಂಡಿ ಕಾಮಗಾರಿ, 443 ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, 30 ಇತರೆ ಕಾಮಗಾರಿ ಸೇರಿ ಒಟ್ಟು 1,911
ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬರದ ನಾಡಿನಲ್ಲಿ ಅಂತರ್ಜಲ ವೃದ್ಧಿ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳ, ಸರ್ಕಾರಿ ಜಮೀನು, ಹಳ್ಳ ಮತ್ತಿತರ ಕಡೆ ಅಂತರ್ಜಲ ಚೇತನ, ಜಲಸಂರಕ್ಷಣೆಗೆ ಒತ್ತು ನೀಡಲಾಗಿದೆ. 107 ಮಲ್ಟಿ ಆರ್ಚ್‌ ಚೆಕ್‌ಡ್ಯಾಂ, 9 ಬೋಲ್ಡರ್‌ಚೆಕ್‌, 630 ಕೆರೆ ಹೂಳೆತ್ತುವುದು, 132 ಗೋಕಟ್ಟೆ ನಿರ್ಮಾಣ ಪುನಶ್ಚೇತನ ಕಾಮಗಾರಿ, 50 ಕಲ್ಯಾಣಿ ನಿರ್ಮಾಣ ಪುನಶ್ಚೇತನ ಕಾಮಗಾರಿ, ಕಾಲುವೆ, ನಾಲಾ ನಿರ್ಮಾಣ ಸೇರಿ ಒಟ್ಟು 2,544 ಅಂತರ್ಜಲ ಚೇತನ ಕಾಮಗಾರಿಗಳ ನಿರ್ವಹಣೆಗೆ ಚಾಲನೆ ನೀಡಲಾಗಿದೆ. ಆ.15ರಿಂದ ಅ.15ರವರೆಗೆ ರೈತ ಬಂಧು ಅಭಿಯಾನದಡಿ ಪ್ರತಿ ಗ್ರಾಪಂಗೆ ಕನಿಷ್ಠ 25 ಎರೆಹುಳು ತೊಟ್ಟಿ ನಿರ್ಮಿಸಲಾಗುತ್ತಿದೆ.

ಮೂರು ತಾಲೂಕು ರಾಜ್ಯದಲ್ಲೇ ಪ್ರಥಮ
ಪ್ರಸಕ್ತ ವರ್ಷದಲ್ಲಿ ರಾಯಚೂರು ಜಿಲ್ಲೆಗೆ 97ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಿದ್ದರೆ; ಅದರಲ್ಲಿ 1.20 ಕೋಟಿ ಮಾನವ ದಿನ ಸೃಜಿಸಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿತ್ತು. ಈ ವರ್ಷ 1.03 ಕೋಟಿ ಮಾನವ ದಿನಗಳ ಸೃಜನೆ ಗುರಿ ನೀಡಿದ್ದು, ಈವರೆಗೆ ಶೇ.132 ಗುರಿ ತಲುಪಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ ಎಂದರೆ ನರೇಗಾದ ಅನಿವಾರ್ಯತೆ ಏನೆಂಬುದು ತಿಳಿಯುತ್ತದೆ. ಅದರಲ್ಲೂ ಸಿಂಧನೂರು, ಮಸ್ಕಿ ಹಾಗೂ ದೇವದುರ್ಗ ತಾಲೂಕುಗಳು ಮಾತ್ರ ಮೊದಲ ಸ್ಥಾನ ಕಾಯ್ದುಕೊಂಡಿವೆ. ಸದ್ಯ ಜಿಲ್ಲೆಯಲ್ಲಿ 3,31,916 ಜಾಬ್‌ ಕಾರ್ಡ್‌ ಗಳಿದ್ದು, 5,50,525 ಸಕ್ರಿಯ ಕೂಲಿ ಕಾರ್ಮಿಕರಿದ್ದಾರೆ.

ರಾಯಚೂರು ಜಿಲ್ಲೆಯ ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವುದರಿಂದ ನರೇಗಾವನ್ನು ಬಹಳಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಕೇವಲ ಕೂಲಿ ನೀಡುವುದೇ ಮುಖ್ಯ ಉದ್ದೇಶವಾಗಿರದೇ ಸಾಮುದಾಯಿಕ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಿದ್ದೇವೆ. ಗೋದಾಮು, ಸಂತೆ ಕಟ್ಟೆ, ಶಾಲಾ ಕಾಂಪೌಂಡ್‌, ಕೆರೆ ನಿರ್ಮಾಣದಂಥ ಆಸ್ತಿಗಳ ಸೃಜನೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿ ಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗುರಿ ಹಾಕಿಕೊಳ್ಳಲಾಗುವುದು
ಶೇಖ್‌ ತನ್ವಿರ್‌ ಆಸೀಫ್‌, ಸಿಇಒ, ಜಿಪಂ ರಾಯಚೂರು

ನರೇಗಾ ಯೋಜನೆಯನ್ನು ಕೇವಲ ಕೂಲಿ ಕೆಲಸ ನೀಡುವ ಸಾಧನವಾಗಿ ನೋಡದೆ ಸಾಮುದಾಯಿಕ ಆಸ್ತಿಗಳನ್ನು ಸೃಷ್ಟಿಸಲು ಹೆಚ್ಚು ಬಳಸಲಾಗುತ್ತಿದೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಪ್ರತಿ ಮಳೆ ಹನಿ ಹಿಡಿದಿಡುವ ಕೆಲಸಕ್ಕೆ ವಿಶೇಷ ಒತ್ತು ನೀಡಿದ್ದೇವೆ. ಗ್ರಾಮೀಣ ಜನರ ಜೀವನಮಟ್ಟದಲ್ಲಿ ಬದಲಾವಣೆ ತರುವಂಥ ಆಸ್ತಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ. ನರೇಗಾವನ್ನು ಸರಿಯಾಗಿ ಬಳಸಿಕೊಳ್ಳಲು ರಾಯಚೂರು ಜಿಪಂ ದಾಪುಗಾಲು ಇಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವ ಗುರಿ ಹೊಂದಿದ್ದೇವೆ.
ಮಡೋಳಪ್ಪ ಪಿ.ಎಸ್‌, ಯೋಜನಾ ನಿರ್ದೇಶಕರು, ಜಿಪಂ

*ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next