Advertisement

ಮಾಸ್ಕ್ -ಹ್ಯಾಂಡ್‌ ಸ್ಯಾನಿಟೈಜರ್‌ ಪೂರೈಕೆಗೆ ಸೂಚನೆ

04:28 PM Mar 25, 2020 | Naveen |

ರಾಯಚೂರು: ಕೊರೊನಾ ವೈರಸ್‌ ಹರಡದಂತೆ ಕ್ರಮ ಕೈಗೊಳ್ಳಲು ಮಾಸ್ಕ್ಗಳು ಹಾಗೂ ಹ್ಯಾಂಡ್‌ ಸ್ಯಾನಿಟೈಜೆಷನ್‌ನ ಅಭಾವ ಉಂಟಾಗಿದ್ದು, ಅವುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ್‌ ಕುಮಾರ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿಯವರ ಗೃಹ ಕಚೇರಿಯಲ್ಲಿ ಜಿಲ್ಲೆಯ ಮೆಡಿಕಲ್‌ ಸ್ಟೋರ್‌ಗಳ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿದರು. ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ಬೆಲೆಗೆ ಮಾರಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಜೆಷನ್‌ ಪೂರೈಕೆಯಲ್ಲಿ ಕೊರತೆ ಆಗಬಾರದು. ಆದೇಶ ನೀಡಿದ ಕೂಡಲೇ ನಿಗದಿ ಪಡಿಸಿದ ಬೆಲೆಗೆ ಅವುಗಳನ್ನು ಪೂರೈಸಲು ಸಿದ್ಧರಿರಬೇಕು. 200ಎಂಎಲ್‌ ಹ್ಯಾಂಡ್‌ ಸ್ಯಾನಿಟೈಜೆಷನ್‌ಗೆ 100 ರೂ. ದರ ನಿಗದಿಯಾಗಿದೆ. ಅದೇ ದರಕ್ಕೆ ಮಾರಾಟ ಮಾಡಬೇಕು, ಸನ್ನಿವೇಶದ ಲಾಭ ಪಡೆದು ಹೆಚ್ಚಿನ ಬೆಲೆಗೆ ಮಾಡುವುದಾಗಲಿ ಅಥವ ಕೃತಕ ಅಭಾವ ಸೃಷ್ಟಿಸುವುದಾಗಲಿ ಕಂಡುಬಂದಲ್ಲಿ ಕಾನೂನು ಮಾಪನ ಶಾಸ್ತ್ರ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಅಧಿಕಾರಿಗಳು ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವರು ಎಂದರು.

ಹ್ಯಾಂಡ್‌ ಸ್ಯಾನಿಟೈಜೆಷನ್‌ನ ಹಳೆ ದಾಸ್ತಾನುಗಳನ್ನು ಕೂಡ ಗರಿಷ್ಠ ರಿಟೇಲ್‌ ದರದಲ್ಲೇ ಮಾರಬೇಕು. ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಜೆಷನ್‌ ಹೈದರಾಬಾದ್‌, ಪಾಂಡಿಚೇರಿ ಸೇರಿದಂತೆ ಇತರ ರಾಜ್ಯಗಳಿಂದ ಪೂರೈಕೆಯಾಗುವುದರಿಂದ ಪ್ರಸ್ತುತವಾಗಿ ಸಾರಿಗೆ ಸಮಸ್ಯೆ ಉದ್ಭವಿಸಿದೆ. ಟ್ರಕ್‌ಗಳಿಗೆ ಸುಲಭವಾಗಿ ಸಂಚಾರ ಮಾಡಿಕೊಡಲು ಅನುವು ಮಾಡಿಕೊಟ್ಟರೆ ಜಿಲ್ಲೆಯ ಜನತೆಗೆ ಅಗತ್ಯವಾಗಿರುವ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಜೆಷನ್‌ಗಳನ್ನು ಪೂರೈಸಲು ಸಿದ್ಧವಿದೆ ಎಂದು ಸಂಘದ ಸದಸ್ಯರು ಡಿಸಿ ಗಮನಕ್ಕೆ ತಂದರು.

ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗುವುದು. ವಾಹನ ಹಾಗೂ ವಾಹನ ಸಂಖ್ಯೆಯನ್ನು ನಮೂದಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿ, ಹೊರ ರಾಜ್ಯದಿಂದ ಅವುಗಳನ್ನು ಪೂರೈಸಲು ಅವಕಾಶ ಮಾಡಲಾಗುವುದು. ಯಾವುದೇ ಕಾರಣಕ್ಕೂ ನಕಲಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಅರುಣ ಕುಮಾರ್‌, ತೂಕ ಮತ್ತು ಅಳತೆ ಇಲಾಖೆ ಇನ್ಸ್‌ಪೆಕ್ಟರ್‌ ಮಹಾಂತಯ್ಯ, ಡ್ರಗ್‌ ಕಂಟ್ರೋಲರ್‌ ವೆಂಕಟೇಶ್‌, ಮೆಡಿಕಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ವೆಂಕಟೇಶ ಸೇರಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next