Advertisement

ಭಕ್ತರಿಗೆ ದೂರದಿಂದಲೇ ದೇವರ ದರ್ಶನ

04:47 PM Mar 21, 2020 | Naveen |

ರಾಯಚೂರು: ಸರ್ಕಾರದ ಸ್ಪಷ್ಟ ಆದೇಶದ ಮಧ್ಯೆಯೂ ಮಠ ಮಂದಿರಗಳಿಗೆ ಜನ ಬರುವುದು ನಿಲ್ಲಿಸದ ಕಾರಣ ದೇವಸ್ಥಾನಗಳು ಬಾಗಿಲು ಮುಚ್ಚುವ ಮೂಲಕ ದರ್ಶನವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ.

Advertisement

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರು ಬಾರದಂತೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಈಗಾಗಲೇ ಮನವಿ ಮಾಡಿದ್ದರು. ಆದರೂ ಭಕ್ತರ ಸಂಖ್ಯೆ ಕಡಿಮೆಯಾಗದ ಕಾರಣ ಮಠದ ದ್ವಾರ ಬಾಗಿಲು ಕೂಡ ಮುಚ್ಚಲಾಗಿದೆ. ಇದರಿಂದ ಭಕ್ತರು ಮಠಕ್ಕೆ ಬಂದರೂ ದರ್ಶನ ಸಿಗುವುದಿಲ್ಲ.

ಈ ಕುರಿತು ಪ್ರಕಟಣೆ ನೀಡಿರುವ ಶ್ರೀಮಠದ ವ್ಯವಸ್ಥಾಪಕ ಎಸ್‌.ಕೆ.ಶ್ರೀನಿವಾಸರಾವ್‌ ಅವರು, ಭಕ್ತರ ಆರೋಗ್ಯದ ದೃಷ್ಟಿಯಿಂದ ಶ್ರೀ ಮಠದ ಬಾಗಿಲು ಹಾಕಲಾಗಿದೆ. ಕೊರೊನಾ ಮಾರಣಾಂತಿಕ ಕಾಯಿಲೆ ಎಲ್ಲೆಡೆ ಹರಡುತ್ತಿದೆ. ಅದನ್ನು ತಡೆಯಬೇಕಿದೆ. ದೇಶದ ಪ್ರಧಾನಿ ಕೂಡ ಜನತಾ ಕರ್ಫ್ಯೂ ಘೋಷಿಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಭಕ್ತರು ಮನೆಗಳಲ್ಲಿ ದೇವರ ಧ್ಯಾನ ಮಾಡಬೇಕು. ಮಠದಲ್ಲಿ ತೀರ್ಥ ಪ್ರಸಾದ ವ್ಯವಸ್ಥೆ ಕೂಡ ತಾತ್ಕಾಲಿಕವಾಗಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ದೇವಸೂಗುರಿನ ಶ್ರೀ ಸೂಗೂರೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಬೆಳ್ಳಿ ರಥೋತ್ಸವ, ದೀಡ್‌ ನಮಸ್ಕಾರ, ನಾಮಕರಣ, ಮದುವೆಯಂಥ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ನಿತ್ಯ ದಾಸೋಹ ಸ್ಥಗಿತಗೊಳಿಸಲಾಗಿದೆ. ಇನ್ನೂ ಅಮಾವಾಸ್ಯೆ, ಯುಗಾದಿಯಂದು ಭಕ್ತರು ಬಂದರೂ ದೂರದಿಂದಲೇ ದೇವರ ದರ್ಶನ ಮಾಡಿಕೊಂಡು ಹೋಗಬೇಕಿದೆ. ಅಂದು ಜರುಗುತ್ತಿದ್ದ ಬೇವು ವಿತರಣೆ, ಪಂಚಾಂಗ ಪಠಣ ಕಾರ್ಯಕ್ರಮವನ್ನು ಕೂಡ ರದ್ದು ಮಾಡಲಾಗಿದೆ. ಇನ್ನೂ ದೇವಸ್ಥಾನ ಆಸುಪಾಸಿನ ಮಳಿಗೆಗಳನ್ನೂ ತಾತ್ಕಾಲಿಕವಾಗಿ ಮುಚ್ಚಿಸಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೂ ಬಾರದಂತೆ ಮನವಿ ಮಾಡಲಾಗುತ್ತಿದೆ.

Advertisement

ಇನ್ನೂ ತಾಲೂಕಿನ ಗಾಣಧಾಳ ಪಂಚಮುಖೀ ದೇವಸ್ಥಾನದಲ್ಲೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿಲ್ಲ. ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸೂಚನೆ ಮೆರೆಗೆ ತಾಲೂಕಿನ ಪಂಚಮುಖೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಎರಕಲಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದರ್ಶನ ನಿಷೇಧಿ ಸಲಾಗಿದೆ. ಈ ಎರಡು ದೇವಸ್ಥಾನಗಳಲ್ಲಿ ಎಲ್ಲ ಸೇವೆಗಳು, ಉತ್ಸವಗಳು ಹಾಗೂ ಮದುವೆ ಸಮಾರಂಭ ನಡೆಸಲಾಗುವುದಿಲ್ಲ ಎಂದು ಪಂಚಮುಖೀ ಪ್ರಾಣದೇವರ ಸೇವಾ ಸಮಿತಿ ಅಧ್ಯಕ್ಷ ಶಾಮಾಚಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next