Advertisement

ಮಂಕಾದ ಮಕರ ಸಂಕ್ರಾಂತಿ ಪುಣ್ಯಸ್ನಾನ

06:03 PM Jan 15, 2021 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಸಂಕ್ರಾಂತಿ ಹಬ್ಬ ಈ ಬಾರಿ ಕೋವಿಡ್‌-19 ಕಾರಣಕ್ಕೆ ತುಸು ಮಂಕಾಗಿತ್ತು. ಕೃಷ್ಣಾ, ತುಂಗಭದ್ರಾ ನದಿಗೆ ಪುಣ್ಯಸ್ನಾನಕ್ಕೆ ಬರುತ್ತಿದ್ದ ಜನರ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂತು. ಹಳ್ಳಿ ಮಾತ್ರವಲ್ಲದೇ ನಗರದಲ್ಲೂ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲೆಯ ಜನ ಹಬ್ಬದ ನಿಮಿತ್ತ ಬೆಳಗ್ಗೆ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಲಾಗಿತ್ತು.

Advertisement

ಸೆಗಣಿಗಳಿಂದ ಕೊಂತೆಮ್ಮಗಳನ್ನು ಮಾಡಿ ಪಾಂಡವರ ಪ್ರತಿಷ್ಠಾಪನೆ ಮಾಡಲಾಗಿತ್ತು. ಎಲ್ಲ ತರಕಾರಿಗಳನ್ನು ಹಾಕಿ ವಿಶೇಷ ಖಾದ್ಯವಾದ ಭರ್ತ, ಸಜ್ಜೆ ರೊಟ್ಟಿ, ಎಣ್ಣೆ ಬದನೆಕಾಯಿ, ಎಳ್ಳಿನ ಹೋಳಿಗೆ, ಶೆಂಗಿನ ಪುಡಿ, ಚಿತ್ರಾನ್ನ, ಮೊಸರನ್ನ ಸೇರಿದಂತೆ ಹತ್ತು ಹಲವು ಖಾದ್ಯಗಳನ್ನು ಮಾಡಲಾಗಿತ್ತು. ಪುಣ್ಯಸ್ನಾನ ಮಾಡಿದ ಬಳಿಕ ನದಿಪಾತ್ರದಲ್ಲಿ ಕುಟುಂಬ ಸದಸ್ಯರೆಲ್ಲ ಕೂಡಿ ಊಟ ಸವಿದು ಆಗಮಿಸಿದರು.  ನದಿಪಾತ್ರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಗ್ರಾಮೀಣ ಭಾಗದಲ್ಲಿ ಗುಂಡು ಎತ್ತುವ ಸ್ಪರ್ಧೆ ಆಯೋಜಿಸಲಾಗಿತ್ತು. ಎತ್ತುಗಳಿಂದ ಭಾರ ಎಳೆಸುವ ಸ್ಪರ್ಧೆ, ಕಿಡಿ ಹಾಯಿಸುವ ಸ್ಪರ್ಧೆಗಳು ಜರುಗಿದವು. ಕೆಲವೆಡೆ
ಜಾತ್ರೆಗಳನ್ನು ನಡೆಸಲಾಯಿತು.

ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಜನ:
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಜನ ಉಭಯ ನದಿಗಳ ಪಾತ್ರದಲ್ಲಿರುವ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರು. ಮಂತ್ರಾಲದಯ ಶ್ರೀ ರಾಘವೇಂದ್ರ ಸ್ವಾಮಿ ಮಠ, ದೇವಸೂಗೂರಿನ ಸೂಗೂರೇಶ್ವರ, ಕೊಪ್ಪರದ ಲಕ್ಷಿ¾ ನರಸಿಂಹಸ್ವಾಮಿ, ಗೂಗಲ್‌ ಪ್ರಭುಸ್ವಾಮಿ, ಬಿಚ್ಚಾಲಿ, ಕುರುವಪುರದ ಶ್ರೀಪಾದವಲ್ಲಭ ದೇವಸ್ಥಾನ, ಕಾಡೂರಿನ ಆಂಜನೇಯ ಸ್ವಾಮಿ ದೇವಸ್ಥಾನ, ತಿಂಥಿಣಿ ಮೌನೇಶ್ವರ, ಗುರುಗುಂಟಾ ಅಮರೇಶ್ವರ, ಚೀಕಲಪರ್ವಿ, ನಾರದಗಡ್ಡೆ,
ರಾಮಗಡ್ಡೆಗಳಿಗೆ ಸೇರಿದಂತೆ ವಿವಿಧೆಡೆ ಜನ ಪುಣ್ಯ ಸ್ನಾನಕ್ಕೆ ತೆರಳಿದರು. ಆದರೂ ನಿರೀಕ್ಷಿತ ಮಟ್ಟದಲ್ಲಿ ಜನ ಆಗಮಿಸಿರಲಿಲ್ಲ. ಹಂಪಿ ವಿರೂಪಾಕ್ಷೇಶ್ವರ, ಜುರಾಲಾ, ಶ್ರೀಶೈಲ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಪ್ರವಾಸ ತೆರಳಿದ್ದರು.

ಇನ್ನೂ ನಗರದ ಮಹಾತ್ಮಗಾಂ ಧಿ ಕ್ರೀಡಾಂ ಗಣದಲ್ಲಿ ಸಂಕ್ರಾಂತಿ ನಿಮಿತ್ತ ಜೆಸಿಐ ಸಂಸ್ಥೆಯಿಂದ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು, ಮಹಿಳೆಯರು, ಹಿರಿಯರು ಪಾಲ್ಗೊಂಡಿದ್ದರು. ಕೃಷ್ಣ ನದಿ ಪಾತ್ರದಲ್ಲಿ ಮೊಸಳೆಗಳ ಓಡಾಟ ಹೆಚ್ಚಾಗಿರುವ ಕಾರಣ ಉಭಯ ನದಿಗಳ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರು. ಅಪಾಯ ಸ್ಥಳಗಳಿಗೆ ತೆರಳಿದಂತೆ ಎಚ್ಚರಿಕೆ ನೀಡಲಾಗುತ್ತಿತು.

Advertisement

ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ
ಸಂಕ್ರಾಂತಿ ಹಬ್ಬದ ಪ್ರಯುಕ್ತ ನೂರಾರು ಜನ ಭಕ್ತರು ಕೃಷ್ಣಾ ನದಿಯಲ್ಲಿ ಗುರುವಾರ ಪುಣ್ಯಸಾನ್ನ ಮಾಡಿದರು. ವೀರಗೋಟ, ಹೂವಿನಹೆಡಗಿ, ಗೂಗಲ್‌, ಅಣ್ಣೆಲಿಂಗೇಶ್ವರ ಸೇರಿ ಕೃಷ್ಣಾನದಿಯಲ್ಲಿ ಪುಣ್ಯಸಾನ್ನ ಮಾಡಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು. ಕುಟುಂಬ ಸಮೇತ ಕೃಷ್ಣಾ ನದಿಗೆ ಆಗಮಿಸಿದ ಜನರು, ಮನೆಯಿಂದ ತಂದ ಅಡುಗೆ ಸೇವಿಸಿದರು. ವೀರಗೋಟ ಕೃಷ್ಣಾನದಿಯಿಂದ ತೆಪ್ಪದಲ್ಲಿ ತಿಂಥಿಣಿ ಮೌನೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಒಬ್ಬರಿಗೆ 20 ರೂ. ದರ ನಿಗದಿ ಮಾಡಲಾಗಿತ್ತು. ಹತ್ತಾರೂ ತೆಪ್ಪಗಳ ಮೂಲಕ ಕೃಷ್ಣಾ ನದಿಯಿಂದ ಮೌನೇಶ್ವರ ದೇವಸ್ಥಾನಕ್ಕೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next