Advertisement
ರಾಯಚೂರು ಮತ್ತು ಯಾದಗಿರಿ ಜಿಲ್ಲೆ ಒಳಗೊಂಡು ರಚನೆಯಾಗಿರುವ ಈ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಚುನಾವಣೆಗಳಲ್ಲಿ 14 ಬಾರಿ ಕಾಂಗ್ರೆಸ್‌ಗೆ ಜಯ ಸಿಕ್ಕಿದೆ. 2014ರಲ್ಲಿ ಎಲ್ಲೆಡೆ ಮೋದಿ ಅಲೆಯಿದ್ದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿತ್ತು. ಆದರೆ 2019ರಲ್ಲಿ ಮೋದಿ ಅಲೆ ಎದುರು ಕಾಂಗ್ರೆಸ್ ಮಂಡಿಯೂರಿತು. ಈ ಬಾರಿಯೂ ಬಿಜೆಪಿಗೆ ಮೋದಿ ಶಕ್ತಿಯನ್ನೇ ನೆಚ್ಚಿಕೊಂಡರೆ, ಕಾಂಗ್ರೆಸ್ ಗ್ಯಾರಂಟಿ, 371 (ಜೆ) ವಿಶೇಷ ಸ್ಥಾನಮಾನ ಸ್ಮರಿಸುವ ಮೂಲಕ ಚುನಾವಣೆಗೆ ಹೊರಟಿದೆ.
Related Articles
Advertisement
ಸೂಕ್ತ ಅಭ್ಯರ್ಥಿಗಾಗಿ ಶೋಧ ನಡೆಸಿದ್ದ ಕಾಂಗ್ರೆಸ್ ಕೊನೆಗೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕಗೆ ಮಣೆ ಹಾಕಿದೆ. ಅಲ್ಪಸಂಖ್ಯಾಕ ಮತಗಳು ಕಾಂಗ್ರೆಸ್ ಪರವಾದರೆ, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಪ್ಲಸ್ ಆಗಲಿದೆ. ದೇವದುರ್ಗದಲ್ಲಿ ಜೆಡಿಎಸ್ ಶಾಸಕರಿದ್ದರೆ, ಸಿಂಧನೂರು, ಮಾನ್ವಿ, ಲಿಂಗಸೂಗೂರಿನಲ್ಲಿ ಜೆಡಿಎಸ್ ಬಲಿಷ್ಠವಾಗಿದೆ.
14 ಬಾರಿ ಗೆದ್ದು ಬೀಗಿದ್ದ ಕಾಂಗ್ರೆಸ್:
1952ರಿಂದ ಈ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 14 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, 2 ಬಾರಿ ಬಿಜೆಪಿ ಹಾಗೂ ಒಮ್ಮೆ ಪಕ್ಷೇತರ, ಒಮ್ಮೆ ಜನತಾದಳಕ್ಕೆ ಗೆಲುವು ದಕ್ಕಿದೆ. 1952ರಲ್ಲಿ ಹೈದರಾಬಾದ್ ರಾಜ್ಯವಾಗಿದ್ದ ಸಂದರ್ಭದಲ್ಲಿ ಯಾದಗಿರಿ ಲೋಕಸಭಾ ಕ್ಷೇತ್ರವಿತ್ತು. ಮೊದಲ ಚುನಾವಣೆಯಲ್ಲಿ ಕೃಷ್ಣಾಚಾರಿ ಜೋಷಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಮೈಸೂರು ರಾಜ್ಯಕ್ಕೆ ಒಳಪಟ್ಟ ಬಳಿಕ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ಒಳಗೊಂಡು ಈ ಕ್ಷೇತ್ರ ರಚನೆಯಾಯಿತು. ಕಾಂಗ್ರೆಸ್‌ನಿಂದ 1957ರಲ್ಲಿ ಜಿ.ಎಸ್.ಮೇಲುಕೋಟೆ ಗೆಲುವು ಸಾಧಿಸಿದ್ದಾರೆ.
1962ರಲ್ಲಿ ಜಗನ್ನಾಥ ರಾವ್ ವೆಂಕಟರಾವ್ ಚಂಡ್ರಿಕಿ (ಕಾಂಗ್ರೆಸ್), 1967ರಲ್ಲಿ ಆರ್.ವಿ.ನಾಯಕ (ಪಕ್ಷೇತರ), 1971ರಲ್ಲಿ ಪಂಪನಗೌಡ ಸಕ್ರೆಪ್ಪಗೌಡ ಅತ್ತನೂರು (ಕಾಂಗ್ರೆಸ್) ಆಯ್ಕೆಯಾಗಿದ್ದರು. 1977ರಲ್ಲಿ ರಾಜಶೇಖರ ಮಲ್ಲಪ್ಪ (ಕಾಂಗ್ರೆಸ್), 1980ರಲ್ಲಿ ಬಿ.ವಿ.ದೇಸಾಯಿ (ಕಾಂಗ್ರೆಸ್), 1984ರಲ್ಲಿ ಬಿ.ವಿ.ದೇಸಾಯಿ (ಕಾಂಗ್ರೆಸ್), 1986ರಲ್ಲಿ ಬಿ.ವಿ.ದೇಸಾಯಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಂ.ವೈ ಘೋರ್ಪಡೆ (ಕಾಂಗ್ರೆಸ್) ಆಯ್ಕೆಯಾದರು.
1989ರಲ್ಲಿ ರಾಜಾ ಅಂಬಣ್ಣ ನಾಯಕ ದೊರೆ (ಕಾಂಗ್ರೆಸ್), 1991ರಲ್ಲಿ ಎ.ವೆಂಕಟೇಶ ನಾಯಕ (ಕಾಂಗ್ರೆಸ್), 1996ರಲ್ಲಿ ರಾಜಾರಂಗಪ್ಪ ನಾಯಕ (ಜನತಾದಳ) ಗೆದ್ದಿದ್ದರು. ಸರಕಾರ ಪತನದ ಹಿನ್ನೆಲೆಯಲ್ಲಿ 1998ರಲ್ಲಿ ನಡೆದ ಮರುಚುನಾವಣೆ ಮಾತ್ರವಲ್ಲದೆ 1999, 2004ರಲ್ಲಿಯೂ ಎ.ವೆಂಕಟೇಶ ನಾಯಕ (ಕಾಂಗ್ರೆಸ್) ಗೆದ್ದರು. 2009ರಲ್ಲಿ ಸಣ್ಣ ಫಕೀರಪ್ಪ(ಬಿಜೆಪಿ), 2014ರಲ್ಲಿ ಬಿ.ವಿ.ನಾಯಕ (ಕಾಂಗ್ರೆಸ್), 2019ರಲ್ಲಿ ರಾಜಾ ಅಮರೇಶ್ವರ ನಾಯಕ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.
-ಸಿದ್ಧಯ್ಯಸ್ವಾಮಿ ಕುಕನೂರು