ರಾಯಚೂರು: ಸದಾ ನೀರಿನಿಂದ ಕಂಗೊಳಿಸುತ್ತಿದ್ದ ತಾಲೂಕಿನ ಮರ್ಚೆಡ್ ಕೆರೆ ಈ ಬಾರಿ ಬೇಸಿಗೆಯಲ್ಲಿ ಸಂಪೂರ್ಣ ಬರಿದಾಗಿದ್ದು, ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಕೆರೆ ನೀರು ಸಂಪೂರ್ಣ ಆವಿಯಾಗಿ ತಲಸ್ಪರ್ಶಿಯಾಗಿದೆ.
ನೀರಿಲ್ಲದೆ ಕೆರೆ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿವೆ. ಕೆರೆಯ ಕೆಸರಲ್ಲಿ ಬದುಕುಳಿದ ಮೀನುಗಳು ವಿಲವಿಲ ಒದ್ದಾಡುತ್ತಿವೆ.
ಮೀನುಗಾರರು ಕೆಸರಿನ ಮಡುವಿನಲ್ಲಿ ಬಿದ್ದಿರುವ ಮೀನುಗಳನ್ನು ಹಿಡಿಯುತ್ತಿದ್ದಾರೆ. ಸತ್ತು ಬಿದ್ದ ಮೀನುಗಳನ್ನು ತಿನ್ನಲು ಸಾವಿರಾರು ಪಕ್ಷಿಗಳು ಕೆರೆ ಹತ್ತಿರ ಬರುತ್ತಿವೆ. ಕೆರೆಯಲ್ಲಿ ನೀರು ಪೂರ್ತಿಯಾಗಿದ್ದಾಗ ವಿವಿಧ ಭಾಗಗಳಿಂದ ಪಕ್ಷಿಗಳು ವಲಸೆ ಬರುತ್ತಿದ್ದವು. ಆದರೆ ಈಗ ಸತ್ತ ಮೀನುಗಳನ್ನು ತಿನ್ನಲು ಬರುವಂತಾಗಿದೆ.
ಕೃಷ್ಣ ಮತ್ತು ತುಂಗಭದ್ರಾ ನದಿಯಲ್ಲೂ ಇದೆ ಪರಿಸ್ಥಿತಿ ನಿರ್ಮಾಣವಾಗಿದ್ದು ಜಲಚರಗಳು ನೀರಿಲ್ಲದೆ ಹಾಹಾಕಾರಕ್ಕೆ ತುತ್ತಾಗಿವೆ. ಕೃಷ್ಣಾ, ತುಂಗಭದ್ರಾ ನದಿಗಳು ಬಹುತೇಕ ಬರಿದಾಗಿದ್ದು, ಕೆಲವು ತಗ್ಗು ಪ್ರದೇಶಗಲ್ಲಿ ನೀರಿದ್ದು ಉಳಿದಂತೆ ಸಂಪೂರ್ಣ ಬತ್ತಿ ಹೋಗಿದೆ. ಅಲ್ಲಿಯೂ ಜಲಚರಗಳು ನೀರಿಲ್ಲದೆ ಸಾಯುವಂತಾಗಿದೆ.