Advertisement

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ

01:11 PM Nov 02, 2019 | Team Udayavani |

ರಾಯಚೂರು: ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಎಂದಿಗೂ ರಾಜಕೀಯ ಮಾಡುವುದಿಲ್ಲ. ಹಿಂದುಳಿದ ರಾಯಚೂರು ಜಿಲ್ಲೆ ಸಮಗ್ರ ಅಭಿವೃದ್ಧಿಗೆ ನಾನು ಶಕ್ತಿ ಮೀರಿ ಶ್ರಮಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 64ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರ ಮಕ್ಕಳ ವಿಚಾರದಲ್ಲೂ ರಾಜಕೀಯ ಮಾಡಿತ್ತು. ಆದರೆ, ನಮ್ಮ ಸರ್ಕಾರ ಅಂಥ ತಪ್ಪು ಮಾಡುವುದಿಲ್ಲ. ಆ ಸರ್ಕಾರ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ಶಾಲೆಗೆ ಬಿಸಿಯೂಟ ವಿತರಣೆ ನಿಷೇಧಿಸಿತ್ತು.

ನಮ್ಮ ಸರ್ಕಾರ ಇಂದಿನಿಂದ ಪುನಃ ಬಿಸಿಯೂಟ ಆರಂಭಿಸಲಿದೆ ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ನೈಜ ಕಾಳಜಿ ಇಲ್ಲ. ಮೇಲ್ನೋಟಕ್ಕೆ ಹಾಗೆ ತೋರಿಸಿಕೊಂಡರು ತಾವು ಮಾತ್ರ ಕೋಟ್ಯಂತರ ಮೌಲ್ಯದ ಗಡಿಯಾರ ಕಟ್ಟಿಕೊಳ್ಳುವ ಮನಸ್ಥಿತಿ ಹೊಂದಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಬಡವರಿಗೆ ಮಿಡಿಯುವ ವ್ಯಕ್ತಿಯಾಗಿದ್ದಾರೆ.

ನೆರೆ ಪೀಡಿತರ ಸಂಕಷ್ಟಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ನೆರೆ ಪೀಡಿತರಿಗೆ ಪರಿಹಾರ ವಿತರಿಸಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡಲಾಗುತ್ತಿದೆ ಎಂದು ವಿವರಿಸಿದರು.

Advertisement

ಜನರ ಸಮಸ್ಯೆ ಅರಿಯಲು ರಾಜ್ಯಾದ್ಯಂತ ಸುತ್ತಾಡುತ್ತಿದ್ದೇನೆ. ಹೋಟೆಲ್‌ಗ‌ಳಲ್ಲಿ ಉಳಿಯದೆ ಸರ್ಕಾರಿ ಆಸ್ಪತ್ರೆಗಳಲ್ಲೇ ವಾಸ ಮಾಡುವ ಮೂಲಕ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ತುಂಗಭದ್ರಾ ಜಲಾಶಯದಲ್ಲಿ ಹಿಂದೆ 130 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತಿತ್ತು. ಈಗ 80 ಟಿಎಂಸಿ ಅಡಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಎರಡು ಬೆಳೆಗೆ ನೀರು ನೀಡಲು ಶ್ರಮಿಸುವುದಾಗಿ ಹೇಳಿದರು.

ಪ್ರಧಾನಿ ಸಬ್‌ ಕೇ ಸಾತ್‌ ಸಬ್‌ ಕೇ ವಿಕಾಸ್‌ ಎಂಬ ಘೋಷವಾಕ್ಯದಡಿ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವಿಶ್ವದಲ್ಲಿ ನಮ್ಮ ದೇಶ ಅಗ್ರಗಣ್ಯವಾಗಲಿದೆ ಎಂದು ಹೇಳಿದರು.

ಜಿಲ್ಲೆಗೆ 2000 ವರ್ಷಗಳ ಇತಿಹಾಸವಿದೆ. ಶಿಲಾಯುಗದ ಸಂಸ್ಕೃತಿಯಿಂದ ಶುರುವಾಗಿ ಕರ್ನಾಟಕದ ಎಲ್ಲ ಮುಖ್ಯ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿದೆ. ಬ್ರಿಟಿಷರು ಹಾಗೂ ಹೈದರಾಬಾದ ನಿಜಾಮರ ದಬ್ಟಾಳಿಕೆ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ರಾಯಚೂರು ಮುಖ್ಯ ಪಾತ್ರ ವಹಿಸಿತ್ತು ಎಂದು ಬಣ್ಣಿಸಿದರು.

ನಂತರ ಡಾ| ಬಿ.ಆರ್‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಆದಿ ಜಾಂಭವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಐರಾವತ ಯೋಜನೆಯಡಿ 52 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಿದರು.

ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಸೇಂಟ್‌ ಮೇರಿ ಕಾನ್ವೆಂಟ್‌ ಶಾಲೆಯ 500 ಮಕ್ಕಳ ನೃತ್ಯ ಹಾಗೂ ಮುದಗಲ್‌ ಎಸ್‌ವಿಎಂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ ಗಮನ ಸೆಳೆಯಿತು.

ನಗರ ಶಾಸಕ ಡಾ| ಎಸ್‌. ಶಿವರಾಜ ಪಾಟೀಲ, ಎಂಎಲ್‌ಸಿ ಎನ್‌. ಎಸ್‌. ಭೋಸರಾಜು, ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಡಿಸಿ ಆರ್‌. ವೆಂಕಟೇಶಕುಮಾರ, ಜಿಪಂ ಸಿಇಒ ಲಕ್ಷ್ಮೀ ಕಾಂತ ರೆಡ್ಡಿ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಎಸಿ ಸಂತೋಷ ಕಾಮಗೌಡ, ಎಡಿಸಿ ದುರಗೇಶ, ತಹಶೀಲ್ದಾರ್‌ ಹಂಪಣ್ಣ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next