ರಾಯಚೂರು: ಕಾಂಗ್ರೆಸ್ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಶಾಸಕರ ಪತ್ನಿ, ಅಳಿಯನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 7 ಗಂಟೆಗೆ ಶುರುವಾದ ದಾಳಿ ಸತತ 6 ಗಂಟೆಗಳಿಂದ ನಿರಂತರವಾಗಿ ನಡೆಯುತ್ತಿದೆ.
ಶಾಸಕ ಬಸನಗೌಡ ದದ್ದಲ್ ಬೆಂಗಳೂರು ನಿವಾಸದಲ್ಲಿ ಉಳಿದುಕೊಂಡಿದ್ದು, ನಗರದ ಮನೆಯಲ್ಲಿ ಅವರ ಪತ್ನಿ & ಅಳಿಯ ಸೇರಿ ಕೆಲಸಗಾರರು ಮಾತ್ರ ಇದ್ದರು.
ಅಧಿಕಾರಿಗಳು ದದ್ದಲ್ ಅಳಿಯ ಚನ್ನಬಸವರನ್ನು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಅವರನ್ನು ಒಂಟಿಯಾಗಿ ಬಿಡದೆ ವಿಚಾರಣೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮನೆಯ ಸದಸ್ಯರ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೇ ಬಸನಗೌಡ ದದ್ದಲ್ ರ ಕಾರುಗಳನ್ನು ಕೂಡ ಶೋಧಿಸಲಾಗಿದೆ.
ಇನೋವಾ ಕ್ರಿಸ್ಟಾ, ಮಹಿಂದ್ರಾ ಸ್ಕಾರ್ಪಿಯೊ ಕಾರುಗಳಲ್ಲಿ ತಪಾಸಣೆ ಮಾಡಲಾಯಿತು. ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಧಿಕಾರಿಗಳ ಜೊತೆ ಸಿ.ಆರ್.ಪಿ.ಎಫ್. ಭದ್ರತಾ ಸಿಬ್ಬಂದಿ ಕೂಡ ಇದ್ದಾರೆ.