ರಾಯಚೂರು: ಬರದ ನಾಡಿಗೆ ನೀರುಣಿಸುವ ಮಹತ್ವದ ತಿಮ್ಮಾಪುರ ಏತ ನೀರಾವರಿ ಯೋಜನೆ ಇಂದು ಲೋಕಾರ್ಪಣೆಯಾಗುತ್ತಿದೆ.
24 ಹಳ್ಳಿಗಳ ಸುಮಾರು 26 ಸಾವಿರ ಎಕರೆಗೆ ನೀರು ಹರಿಸುವ ಉದ್ದೇಶದಿಂದ ಯೋಜನೆ ಜಾರಿ ಮಾಡಲಾಗುತ್ತಿದೆ. ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ಬಳಿ ತುಂಗಭದ್ರಾ ನದಿ ಮೂಲಕ ತಿಮ್ಮಾಪುರ ಏತನೀರಾವರಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ತುಂಗಭದ್ರಾ ನದಿ ಹತ್ತಿರದಲ್ಲಿದ್ದರೂ ಕೃಷಿಗೆ ನೀರಿಲ್ಲದೇ ಪರದಾಟವಿತ್ತು. ಹೀಗಾಗಿ 2018 ಫೆಬ್ರವರಿ 18 ರಂದು ಅಂದಿನ ಸಿಎಂ ಸಿದ್ದರಾಮಯ್ಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 109 ಕೋಟಿ ರೂ. ವೆಚ್ಚದ ಕಾಮಗಾರಿಗೆ 2019 ರಲ್ಲಿ ಕಾಮಗಾರಿ ಟೆಂಡರ್ ಆಗಿತ್ತು. ತುಂಗಭದ್ರಾ ನದಿಯಿಂದ 160 ಎಚ್.ಪಿ ಸಾಮರ್ಥ್ಯದ 4 ಮೋಟರ್ ಅಳವಡಿಸಿ ನದಿಯಿಂದ 17.10 ಕಿಮೀ ಏತನೀರಾವರಿಗೆ ಟಿಎಲ್ ಬಿಸಿ ನೀರು ಹಾಯಿಸುವುದು ಯೋಜನೆ ಮೂಲ ಉದ್ದೇಶವಾಗಿದೆ. ಈ ಯೋಜನೆ ಜಾರಿಯಿಂದ ರೈತರ ಎರಡು ದಶಕಗಳ ಕನಸು ಈಗ ನನಸಾಗುತ್ತಿದೆ.
ವಾಡಿಕೆ ಮಳೆ ಕೊರತೆ, ಕೊನೆ ಭಾಗಕ್ಕೆ ಕಾಲುವೆ ನೀರು ಸಿಗದೆ ಪ್ರತಿ ವರ್ಷ ರೈತರು ಪರದಾಡುತ್ತಿದ್ದರು. ಭತ್ತ, ಹತ್ತಿ, ಮೆಣಸಿನಕಾಯಿ, ತೋಟಗಾರಿಕೆ ಬೆಳೆ ಬೆಳೆಯಲು ಪ್ರಯಾಸಪಡುತ್ತಿದ್ದರು. ಅಂದಿನ ಶಾಸಕ ಹಂಪನಗೌಡ ಬಾದರ್ಲಿ ಈ ಯೋಜನೆ ಜಾರಿಗ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಈ ಯೋಜನೆಯಿಂದ ಕೊಂಚಮಟ್ಟಿಗಾದರೂ ನೀರಿನ ಸಮಸ್ಯೆ ನೀಗಲಿದೆ.