ರಾಯಚೂರು: ರಾಯಚೂರು ಸೇರಿದಂತೆ ದೇಶದ ಐದು ಕಡೆಗಳಲ್ಲಿ ಕಾರ್ಯ ನಿರ್ವಹಿಸಲಿರುವ ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ಇನ್‍ಫಾರ್ಮೇಷನ್ ಟೆಕ್ನಾಲಜಿ (ಐಐಐಟಿ)ಗಳಿಗೆ ರಾಷ್ಟ್ರೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿರುವುದರಿಂದ ರಾಯಚೂರಿನ ಐಐಐಟಿ ಸಂಸ್ಥೆಯ ಚಟುವಟಿಕೆಗಳಿಗೆ ಹೆಚ್ಚಿನ ಚಾಲನೆ ಸಿಕ್ಕಿದಂತಾಗಿರುವುದು ಅತ್ಯಂತ ಸಂತೋಷದ ಸಂಗತಿ. ಈ ಬಗ್ಗೆ ನಾನು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಐಐಐಟಿಯನ್ನು ಅತೀ ಶೀಘ್ರವಾಗಿ ಕಾರ್ಯಾರಂಭಿಸಬೇಕೆಂಬುದು ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಮಾರ್ಚ್‍ನಲ್ಲಿಯೇ ಲೋಕಸಭೆಯಲ್ಲಿ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದ್ದು, ಈಗ ರಾಜ್ಯಸಭೆಯಲ್ಲೂ ಈ ವಿಧೇಯಕವನ್ನು ಅಂಗೀಕರಿಸಿರುವುದರಿಂದ ರಾಯಚೂರಿನ ಐಐಐಟಿಯು ಸಂಪೂರ್ಣ ಸಾಕಾರಗೊಂಡಂತಾಗಿದೆ ಎಂದರು.
ಈ ಐಐಐಟಿ ಗೆ ಹಸಿರು ನಿಶಾನೆ ಸಿಕ್ಕಿರುವುದರಿಂದ ಕರ್ನಾಟಕದ ಶೈಕ್ಷಣಿಕ ಕ್ಷೇತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವಕ್ಕೆ ಪಾತ್ರವಾಗಿದೆ.
ಐಐಐಟಿಗಳಿಗೆ ಪದವಿಯಿಂದ ಹಿಡಿದು ಪಿಹೆಚ್.ಡಿ.ವರೆಗೆ ವಿವಿಧ ಉನ್ನತ ಶಿಕ್ಷಣಗಳ ಪದವಿಗಳನ್ನು ನೀಡುವ ಕಾನೂನುಬದ್ಧ ಅರ್ಹತೆಯು ಈ ಮಸೂದೆಯಿಂದ ಸಿಕ್ಕಿದಂತಾಗಿದೆ.
ನಮ್ಮ ರಾಜ್ಯಕ್ಕೆ ಕೇಂದ್ರದ ವರದಾನವಾಗಿರುವ ಈ ಮಹತ್ವಪೂರ್ಣ ಶಿಕ್ಷಣ ಕೇಂದ್ರವು ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ನಮ್ಮ ರಾಜ್ಯ ಸರ್ಕಾರವೂ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.